ಜನಪ್ರಿಯ ಕಥೆಗಾರ, ಸಾಹಿತಿ ಜಯಂತ್ ಕಾಯ್ಕಿಣಿ ಅನೇಕ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಕೆಲವು ಸಿನಿಮಾಗಳ ಚಿತ್ರಕಥೆ, ಸಂಭಾಷಣೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಆದರೆ, ಅವರು ಬರೆದಿರುವ ಕಥೆಗಳನ್ನಾಧರಿಸಿ ಇದುವರೆಗೂ ಚಿತ್ರಗಳಾಗಿರುವುದು ಬಹಳ ಕಡಿಮೆ.
ಜಯಂತ್ ಕಾಯ್ಕಿಣಿ ಅವರ 'ಹಾಲಿನ ಮೀಸೆ' ಕಥೆಯನ್ನಾಧರಿಸಿ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಈ ಚಿತ್ರವು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದೀಗ ಕಾಯ್ಕಿಣಿ ಅವರ 'ಮಧ್ಯಂತರ' ಎಂಬ ಇನ್ನೊಂದು ಜನಪ್ರಿಯ ಕಥೆಯನ್ನು ಹಿಂದಿಯಲ್ಲಿ 'ಅನ್ಕಹಿ ಕಹಾನಿಯಾ' ಎಂಬ ಆಂಥಾಲಜಿ (ಕಿರುಚಿತ್ರಗಳ ಗುಚ್ಛ) ಯಲ್ಲಿ ಬಳಸಿಕೊಳ್ಳಲಾಗಿದೆ.
ಈ ಚಿತ್ರದಲ್ಲಿ ಮೂರು ಕಥೆಗಳಿದ್ದು, ಅದರಲ್ಲಿ ಜಯಂತ್ ಕಾಯ್ಕಿಣಿ ಅವರ ಕಥೆಯೂ ಇರುವುದು ವಿಶೇಷ. ಸೆಪ್ಟೆಂಬರ್ 17 ರಿಂದ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿರುವ ಈ ಚಿತ್ರವನ್ನು ಅಭಿಷೇಕ್ ಚೌಬೆ ನಿರ್ದೇಶನ ಮಾಡಿದ್ದು, ರಿಂಕು ರಾಜಗುರು ಮತ್ತು ದೆಲ್ಜಾದ್ ಹಿವಾಲೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.