ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಹೈವೋಲ್ಟೇಜ್ ಜೇಮ್ಸ್ ಸಿನಿಮಾ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಭರ್ಜರಿ ಓಪನಿಂಗ್ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದುಕೊಂಡಂತೆ ಜೇಮ್ಸ್ ಸಿನಿಮಾ ಮೊದಲ ದಿನ ಸಾವಿರಾರು ಶೋಗಳು ಹೌಸ್ಫುಲ್ ಪ್ರದರ್ಶನಗೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಜತೆಗೆ ಕೆಜಿಎಫ್ ಸಿನಿಮಾದ ದಾಖಲೆಯನ್ನೂ ಮುರಿದಿದೆ.
ಕೆಜಿಎಫ್ ಸಿನಿಮಾ ವಿಶ್ವಾದ್ಯಂತ ತೆರೆಕಂಡು, ಫಸ್ಟ್ ಡೇ ಬರೋಬ್ಬರಿ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಜೇಮ್ಸ್ ಸಿನಿಮಾ ಮುರಿದಿದ್ದು, ಪವರ್ ಸ್ಟಾರ್ ಸಿನಿಮಾ ಕೆರಿಯರ್ನಲ್ಲಿ ಮೈಲಿಗಲ್ಲು ಸೃಷ್ಟಿಸಿದೆ.
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಜೇಮ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪುನೀತ್ ರಾಜ್ಕುಮಾರ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ಜೇಮ್ಸ್ ಸಿನಿಮಾ ಫಸ್ಟ್ ಡೇ ಬರೋಬ್ಬರಿ 31 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.
ಕರ್ನಾಟಕದಲ್ಲಿ ಮಲ್ಟಿಫ್ಲೆಕ್ಸ್ ಹೊರತುಪಡಿಸಿ, 700ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ತೆರೆ ಕಂಡಿತ್ತು. ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಬರೋಬ್ಬರಿ 5 ಶೋಗಳ ಪ್ರದರ್ಶನ ಮಾಡುವ ಮೂಲಕ, ಹೌಸ್ಫುಲ್ ಆಗಿತ್ತು. ಈ ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲೇ 3000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನಗೊಂಡಿದೆ.
ಮಾಗಡಿ ರಸ್ತೆಯಲ್ಲಿರೋ ವೀರೇಶ್ ಚಿತ್ರಮಂದಿರದಲ್ಲಿ 5 ಶೋಗಳಿಗೆ ಹತ್ತು ಲಕ್ಷ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅದೇ ರೀತಿ ಮೈಸೂರಿನಲ್ಲಿ ಸತತ 85ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನಗೊಂಡಿರುವ ಜೇಮ್ಸ್ 80ರಿಂದ 90 ಲಕ್ಷ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಇದರ ಜೊತೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಜೇಮ್ಸ್ ಸಿನಿಮಾ ಅಬ್ಬರ ಜೋರಾಗಿದೆ.
ಇದನ್ನೂ ಓದಿ: 'ಹೀರೋಪಂತಿ 2' ಟ್ರೈಲರ್ ಬಿಡುಗಡೆ: ಟೈಗರ್ ಶ್ರಾಫ್ ಸಾಹಸ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಫ್ಯಾನ್ಸ್
ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಭಾನುವಾರ ತನಕ, ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇದರ ಜೊತೆಗೆ ತೆಲುಗು, ತಮಿಳು ಹಾಗೂ ವಿದೇಶಗಳಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಮೂರು ದಿನಕ್ಕೆ 50 ಕೋಟಿ ಕಲೆಕ್ಷನ್ ಮಾಡುತ್ತೆ ಎಂಬುದು ಸಿನಿಮಾ ಪಂಡಿತರ ಅಂಬೋಣ.
ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನವಿರುವ ಜೇಮ್ಸ್ ಚಿತ್ರವನ್ನ ಬಹುಕೋಟಿ ವೆಚ್ಚದಲ್ಲಿ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರ ಖಾತೆಗೆ ಕೋಟಿ ಕೋಟಿ ರೂಪಾಯಿ ಜಮಾವಣೆ ಆಗುತ್ತಿದೆ.
ಮತ್ತೊಂದು ಕಡೆ ಪುನೀತ್ ರಾಜ್ಕುಮಾರ್ ಸಿನಿಮಾಗಳಲ್ಲಿ ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಮೌಲ್ಯಗಳು ಜಾಸ್ತಿ ಇರುತ್ತೆ. ಸಿನಿಮಾ ನೋಡಿದ ಎಲ್ಲರೂ ಭಾವುಕರಾಗುತ್ತಿದ್ದಾರೆ. ಪುನೀತ್ ಅವರನ್ನು ಹೀರೊ ಆಗಿ ಕೊನೇ ಬಾರಿಗೆ ದೊಡ್ಡ ಪರದೆಯಲ್ಲಿ ನೋಡುತ್ತಿದ್ದೇವೆ ಎಂಬುದು ಎಲ್ಲ ಪ್ರೇಕ್ಷಕರನ್ನು ಕಾಡುತ್ತಿದೆ.