ನವರಸ ನಾಯಕ ಜಗ್ಗೇಶ್ ಅಗಾಗ ಪರಭಾಷಿಗರನ್ನು ತರಾಟೆಗೆ ತೆಗೆದುಕೊಳ್ಳುವುದು ಗೊತ್ತೇ ಇದೆ. ಮೊನ್ನೆ ರೇಣುಕಾಂಬ ಡಿಜಿಟಲ್ ಥಿಯೇಟರ್ನಲ್ಲಿ ‘ಮಾಲ್ಗುಡಿ ಡೇಸ್’ ಪೋಸ್ಟರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮತ್ತೊಮ್ಮೆ ಡಬ್ಬಿಂಗ್ ವಿಚಾರವಾಗಿ ಗುಡುಗಿದ್ದಾರೆ.
ಕನ್ನಡಕ್ಕೆ ಡಬ್ಬಿಂಗ್ ಪರಭಾಷೆಗಳಿಂದ ಬಂದು ಈಗ ಅದರ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಕನ್ನಡಿಗರು ಅದನ್ನು ತಿರಸ್ಕರಿಸಿದ್ದಾರೆ. ನಾನು ಯಾವಾಗ ನನ್ನ ಭಾಷೆ, ನೆಲ, ಜಲದ ಬಗ್ಗೆ ಮಾತನಾಡಿದರು ಪಕ್ಕದ ರಾಜ್ಯದವರಿಗೆ ಬೇಜಾರು ಆಗುತ್ತದೆ. ಈ ವಿಷಯವಾಗಿಯೇ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಬಿಟ್ಟಿದ್ದಾರೆ.
ನನಗೆ ನನ್ನ ಜನ, ನಮ್ಮ ನಾಯಕ ನಟರು ಮಾತನಾಡಿಸದೆ ಇದ್ದರೆ ಬೇಜಾರು ಮಾಡಿಕೊಳ್ಳಬೇಕು. ‘ನನಗೆ ನನ್ನ ಭಾಷೆ ಹಸುವಿನ ಹಾಲು ಇದ್ದ ಹಾಗೆ, ಪರಭಾಷೆ ನಾಯಿ ಹಾಲು’ ಎಂದು ಜಗ್ಗೇಶ್ ಮತ್ತೊಮ್ಮೆ ಗುಡುಗಿದರು.
ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಪ್ರಯತ್ನಕ್ಕೆ ಶಹಬ್ಬಾಶ್ ಎಂದು ಹೇಳಿದರು. ವಿಜಯ ರಾಘವೇಂದ್ರರಂತಹ ನಟ ಇಂದು 75 ವರ್ಷದ ವೇಷದಲ್ಲಿ ಅಭಿನಯ ಮಾಡಿರುವುದು ಸಾಮಾನ್ಯದ ಮಾತಲ್ಲ. ಚಿಕ್ಕ ವಯಸ್ಸಿನಿಂದಲೇ ಪ್ರಶಸ್ತಿ ಪಡೆಯುತ್ತಾ ಬಂದಿರುವವರು ಅವರು. ಇನ್ನು ಅವರ ‘ಪಂಚಾಕ್ಷರಿ ಗವಾಯಿ’ ಗುರುಗಳ ಪಾತ್ರ ನೋಡಿ ನಾನು ಈ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಖಂಡಿತಾ ಎಂದು ಹೇಳಿದ್ದು ನಿಜವಾಗಿದೆ. ಕಲಾವಿದರಿಗೆ ಬಣ್ಣ ಹಾಗೂ ಜನರೇ ದೇವರು ಎಂದು ಜಗ್ಗೇಶ್ ಅಭಿಪ್ರಾಯಪಟ್ಟರು.