ಪ್ರಭಾಸ್ ಅಭಿನಯದಲ್ಲಿ ಸಲಾರ್ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸುದ್ದಿ ಎಲ್ಲರಿಗೂ ತಿಳಿದಿರುವುದೇ. ಈಗಾಗಲೇ ಚಿತ್ರದ ಅರ್ಧ ಭಾಗ ಚಿತ್ರೀಕರಣ ಆಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಗಿದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ. ಇದೆಲ್ಲದರ ಮಧ್ಯೆ, ಪ್ರಭಾಸ್ ಅಭಿನಯದಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಒಂದು ಪೌರಾಣಿಕ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಎರಡು ವರ್ಷಗಳ ಹಿಂದೆ ನಟ ಪ್ರಭಾಸ್ ಅಭಿನಯದಲ್ಲಿ ಒಂದು ಪೌರಾಣಿಕ ಚಿತ್ರ ನಿರ್ಮಿಸಬೇಕು ಎಂದು ತೆಲುಗಿನ ಖ್ಯಾತ ನಿರ್ಮಾಪಕ ಚರ್ಚೆ ನಡೆಸಿದ್ದರಂತೆ. ಕೆಜಿಎಫ್ ಚಾಪ್ಟರ್ ಒಂದರ ಬಿಡುಗಡೆ ನಂತರ ಪ್ರಶಾಂತ್ ನೀಲ್, ಪ್ರಭಾಸ್ಗೆ ಒಂದು ಹೈ ಬಜೆಟ್ ಪೌರಾಣಿಕ ಚಿತ್ರ ಮಾಡುವುದರ ಬಗ್ಗೆ ಹೇಳಿದ್ದರಂತೆ. ನಟ ಪ್ರಭಾಸ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸು ಇಷ್ಟವಾದರೂ, ಆ ಸಂದರ್ಭದಲ್ಲಿ ಬೇಡ ಎಂದಿದ್ದರಂತೆ.
![prashant neel](https://etvbharatimages.akamaized.net/etvbharat/prod-images/12081598_cgbyu6t.jpg)
ಆಗಷ್ಟೇ ಪ್ರಭಾಸ್ ಬಾಹುಬಲಿ ಚಿತ್ರಗಳನ್ನು ಮುಗಿಸಿದ್ದರು. ಅದರ ಹಿಂದೆಯೇ ಸಾಹೋ, ರಾಧೇ ಶ್ಯಾಮ್ ಮುಂತಾದ ದೊಡ್ಡ ಬಜೆಟ್ನ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಇದರ ಮಧ್ಯೆ, ಒಂದು ಕಡಿಮೆ ಬಜೆಟ್ ಅಥವಾ ಸಣ್ಣ ಚಿತ್ರವಿದ್ದರೆ ಹೇಳಿ ಎಂದಿದ್ದರಂತೆ. ಆಗ ರೂಪುಗೊಂಡಿದ್ದೇ ಈ ಸಲಾರ್ ಚಿತ್ರ. ಹಾಗಾಗಿ ಮೊದಲು ಸಲಾರ್ ಮುಗಿಸಿ, ಆ ನಂತರ ಹೈ ಬಜೆಟ್ನ ಪೌರಾಣಿಕ ಚಿತ್ರವನ್ನು ಕೈಗೆತ್ತಿಕೊಳ್ಳುವ ಮಾತಾಯಿತು ಎನ್ನುವ ಮಾಹಿತಿಯಿದೆ.
ನಾಗ್ ಅಶ್ವಿನ್ ನಿರ್ದೇಶನದ ಹೆಸರಿಡದ ಚಿತ್ರವು ಪ್ರಭಾಸ್ ಅಭಿನಯದ 23ನೇ ಚಿತ್ರವಾಗಿದ್ದು, ಅದರ ನಂತರ ಇನ್ನೊಂದು ಚಿತ್ರ ಮುಗಿಸಿ, 25ನೇ ಚಿತ್ರವಾಗಿ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ದಿಲ್ ರಾಜು ನಿರ್ಮಿಸಲಿದ್ದು, ಪ್ರಾರಂಭವಾಗಲಿಕ್ಕೆ ಇನ್ನೂ ಎರಡು ವರ್ಷಗಳಾದರೂ ಬೇಕು. ಅಷ್ಟರಲ್ಲಿ ಪ್ರಭಾಸ್ ಮತ್ತು ಪ್ರಶಾಂತ್ ಇಬ್ಬರೂ ತಮ್ಮ ಹಳೆಯ ಕಮಿಟ್ಮೆಂಟ್ಗಳನ್ನು ಮುಗಿಸಿ, ಈ ಚಿತ್ರಕ್ಕೆ ಜತೆಯಾಗಲಿದ್ದಾರೆನ್ನುವ ವಿಚಾರ ಹರಿದಾಡುತ್ತಿದೆ.
ಇದನ್ನೂ ಓದಿ: ಮ್ಯಾಂಡರಿನ್ ಭಾಷೆಗೆ ರೀಮೇಕ್ ಆಗುತ್ತಿದೆ 'ದೃಶ್ಯಂ-2'