ವಿಜಯವಾಡ(ಆಂಧ್ರ ಪ್ರದೇಶ): ಬಹು ನಿರೀಕ್ಷಿತ ಆ್ಯಕ್ಷನ್ ಡ್ರಾಮಾ ಸಿನಿಮಾ 'ಆರ್‌ಆರ್‌ಆರ್' ಬಿಡುಗಡೆ ಸಮೀಪಿಸುತ್ತಿದ್ದಂತೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಚಿತ್ರವನ್ನು ಗ್ರ್ಯಾಂಡ್ ಆಗಿ ಸ್ವಾಗತಿಸಲು ಥಿಯೇಟರ್‌ಗಳು ನಾನಾ ರೀತಿಯ ತಂತ್ರಗಳನ್ನು ಅನುಸರಿಸುತ್ತಿವೆ. ಆಂಧ್ರಪ್ರದೇಶದ ವಿಜಯವಾಡದ ಶ್ರೀಕಾಕುಲಂನಲ್ಲಿರುವ ಚಿತ್ರಮಂದಿರದಲ್ಲಿ ವೀಕ್ಷಕರು ಪರದೆಯ ಹತ್ತಿರ ಬರದಂತೆ ಮುಳ್ಳುತಂತಿಯ ಬೇಲಿಯನ್ನು ಅಳವಡಿಸಿರುವುದು ಅಚ್ಚರಿ ಮೂಡಿಸಿದೆ.
ಈ ಹಿಂದೆ ‘ಪುಷ್ಪ’ ಸಿನಿಮಾ ರಿಲೀಸ್ ವೇಳೆ ಅಭಿಮಾನಿಗಳು ಮತ್ತು ಆಡಳಿತ ಮಂಡಳಿ ನಡುವೆ ಭಾರಿ ಜಟಾಪಟಿ ನಡೆದಿತ್ತು. ಹೀಗಾಗಿ ತ್ರಿಬಲ್ ಆರ್ ರಿಲೀಸ್ ವೇಳೆ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶ್ರೀಕಾಕುಳಂನಲ್ಲಿರುವ ಸೂರ್ಯ ಮಹಲ್ ಥಿಯೇಟರ್ ಪರದೆ ಬಳಿಗೆ ಯಾರೂ ಹೋಗದಂತೆ ಬೇಲಿ ಹಾಕಿದ್ದೇವೆ. ಅಭಿಮಾನಿಗಳ ಆಕ್ರಂದನ ತಡೆದುಕೊಳ್ಳುವ ಉದ್ದೇಶ ಹಾಗೂ ಪರದೆಗೆ ಧಾವಿಸಬಾರದು ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಥಿಯೇಟರ್ ಮ್ಯಾನೇಜರ್ ಧನಂಬಾಬು ತಿಳಿಸಿದ್ದಾರೆ.
ಅಭಿಮಾನಿಗಳು ಪರದೆಯತ್ತ ನುಗ್ಗುವುದನ್ನ ತಡೆಯಲು ವಿಜಯವಾಡದ ಅನ್ನಪೂರ್ಣ ಥಿಯೇಟರ್‌ನಲ್ಲಿರುವ ಸ್ಕ್ರೀನ್‌ನಲ್ಲಿ ಪ್ಲೈವುಡ್ ಬೋರ್ಡ್‌ನಲ್ಲಿ ಮೊಳೆಗಳನ್ನು ಹಾಕಲಾಗಿದೆ. ಅಲ್ಲದೇ ಇನ್ನು ಕೆಲವು ಥಿಯೇಟರ್ ಗಳಲ್ಲಿ ಪರದೆಯ ಸುತ್ತ ಬೇಲಿ ಹಾಕಲಾಗುತ್ತಿದೆ. ಸಿನಿಮಾ ನೋಡಲು ಬರುವ ಅಭಿಮಾನಿಗಳು ಯಾವುದೇ ಅಡ್ಡಿ ಇಲ್ಲದೆ, ಯಾರಿಗೂ ತೊಂದರೆ ಕೊಡದೆ ಸಿನಿಮಾ ನೋಡಿ ಆನಂದಿಸಬೇಕು ಎಂಬುದು ಥಿಯೇಟರ್ ಸಂಘಟಕರ ಆಶಯವಾಗಿದೆ.
ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಚಿತ್ರ ಮಾರ್ಚ್ 25 ರಂದು ಬಿಡುಗಡೆಯಾಗಲಿದೆ. ದೇಶದ 9 ಕಡೆ ಪ್ರೀ ರಿಲೀಸ್ ಕಾರ್ಯಕ್ರಮಗಳು ನಡೆಯುತ್ತಿವೆ. ಈಗಾಗಲೇ ಬೆಂಗಳೂರು ಸಮೀಪದ ಚಿಕ್ಕಬಳ್ಳಾಪುರ ಹಾಗೂ ಮುಂಬೈನಲ್ಲಿ ಸಮಾರಂಭಗಳು ನಡೆದಿವೆ.
ಇದನ್ನೂ ಓದಿ: ಜೇಮ್ಸ್ ಪ್ರದರ್ಶನದ ಮಧ್ಯೆ `ದಿ ಕಾಶ್ಮೀರ್ ಫೈಲ್ಸ್'ಗೆ ಒತ್ತಡ