ಲಾಕ್ಡೌನ್ ತೆರವಾದ ನಂತರ 3-4 ಕನ್ನಡ ಸಿನಿಮಾಗಳು ಬಿಟ್ಟರೆ ಬೇರೆ ಸಿನಿಮಾಗಳು ಬಿಡುಗಡೆಯಾಗಲಿಲ್ಲ. ಫೆಬ್ರವರಿ ನಂತರ ಪೊಗರು, ರಾಬರ್ಟ್, ಯುವರತ್ನ ಸಿನಿಮಾಗಳು ಬಿಡುಗಡೆಯಾಗಲಿವೆ ಎಂದು ಅನೌನ್ಸ್ ಮಾಡಲಾಗಿತ್ತು. ಆದರೆ ಧ್ರುವ ಸರ್ಜಾ ಅಭಿನಯದ 'ಪೊಗರು' ನಿಗದಿಪಡಿಸಿದ ದಿನಾಂಕಕ್ಕಿಂತ ಮುನ್ನವೇ ಬಿಡುಗಡೆಯಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್‍ಸ್ಪೆಕ್ಟರ್ ವಿಕ್ರಂ' ಬಿಡುಗಡೆಯಾಗುತ್ತಿದೆ.
ಇದಕ್ಕೂ ಮುನ್ನ 'ಇನ್‍ಸ್ಪೆಕ್ಟರ್ ವಿಕ್ರಂ' ಚಿತ್ರವನ್ನು ಫೆಬ್ರವರಿ 12 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಅಂದುಕೊಂಡದ್ದಕ್ಕಿಂತ ಒಂದು ವಾರ ಮುನ್ನವೇ, ಅಂದರೆ ಫೆಬ್ರವರಿ 5 ರಂದೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಫೆಬ್ರವರಿ 19 ರಂದು 'ಪೊಗರು' ಬಿಡುಗಡೆಯಾಗುತ್ತಿದ್ದು ನಮ್ಮ ಸಿನಿಮಾಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಿನಿಮಾವನ್ನು ಮೊದಲೇ ಬಿಡುಗಡೆ ಮಾಡಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಇದರ ಹಿಂದೆ ಬೇರೆಯದ್ದೇ ಕಾರಣ ಇದೆಯಂತೆ.
ಇದನ್ನೂ ಓದಿ: ಅಂತೂ`ಪೊಗರು' ಚಿತ್ರದ ಬಗ್ಗೆ ಮೌನ ಮುರಿದ ರಶ್ಮಿಕಾ... ಏನ್ ಹೇಳಿದ್ರೂ!?
ಇನ್‍ಸ್ಪೆಕ್ಟರ್ ವಿಕ್ರಂ ಬಿಡುಗಡೆ ತಡವಾಗಿ, ಅದಕ್ಕೂ ಮುನ್ನ ದರ್ಶನ್ ಅಭಿನಯದ 'ರಾಬರ್ಟ್' ಬಿಡುಗಡೆಯಾದರೆ ಮುಂದಿನ ಮೂರು ತಿಂಗಳ ಕಾಲ ನಮ್ಮ ಸಿನಿಮಾಗೆ ತೊಂದರೆಯಾಗಬಹುದು. ಚಿತ್ರ ಬಿಡುಗಡೆ ಮಾಡಲು ಜೂನ್ ಜುಲೈವರೆಗೂ ಕಾಯಬೇಕಾಗುತ್ತದೆ. ಆದ ಕಾರಣ ಪ್ರಜ್ವಲ್ ಚಿತ್ರವನ್ನು ಅಂದುಕೊಂಡದ್ದಕ್ಕಿಂತ ಮುನ್ನವೇ ಬಿಡುಗಡೆ ಮಾಡಲಾಗುವುದು ಎಂಬ ಮಾತು ಗಾಂಧಿನಗರದಾದ್ಯಂತ ಕೇಳಿಬರುತ್ತಿದೆ. ನರಸಿಂಹ ನಿರ್ದೇಶನದ 'ಇನ್‍ಸ್ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ದರ್ಶನ್, ಭಾವನಾ ಮೆನನ್, ರಘು ಮುಖರ್ಜಿ ಹಾಗೂ ಇನ್ನಿತರರು ನಟಿಸಿದ್ದಾರೆ.