ಸ್ಟಾರ್ ನಿರ್ದೇಶಕ, ಪತ್ರಕರ್ತ ಹಾಗೂ ವಿಚಾರವಾದಿ ಇಂದ್ರಜಿತ್ ಲಂಕೇಶ್ ಕೆಲವು ದಿನಗಳ ಹಿಂದೆ ಹಾಲಿವುಡ್ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ಮುಂಬೈ ಹಾಗೂ ವಿದೇಶಕ್ಕೆ ಕೂಡಾ ಹೋಗಿಬಂದಿದ್ದರು.
ಸದ್ಯಕ್ಕೆ ಅವರು ನಿರ್ದೇಶಿಸಿರುವ ಮಲಯಾಳಂ ನಟಿ ಶಕೀಲಾ ಬಯೋಪಿಕ್ ಸಿನಿಮಾವನ್ನು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಸಿನಿಮಾ ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಬಾಲಿವುಡ್ ನಟಿ ರೀಚಾ ಚಡ್ಡಾ 'ದಿ ಶಕೀಲಾ' ಚಿತ್ರದಲ್ಲಿ ಶಕೀಲಾ ಪಾತ್ರ ನಿರ್ವಹಿಸಿದ್ದಾರೆ. ಪಂಕಜ್ ತ್ರಿಪಾಠಿ ಕೂಡಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಇಂದ್ರಜಿತ್ ನಿರ್ದೇಶನದ 'ಲವ್ ಯು ಆಲಿಯಾ' ಚಿತ್ರದಲ್ಲಿ ಶಕೀಲಾ ಒಂದು ಪಾತ್ರದಲ್ಲಿ ನಟಿಸಿದ್ದರು. ಇಂದ್ರಜಿತ್ ವೃತ್ತಿ ಜೀವನದಲ್ಲಿ 'ದಿ ಶಕೀಲಾ' 10 ನೇ ಸಿನಿಮಾ. ತಾವು ನಿರ್ದೇಶಿಸಿದ 'ಐಶ್ವರ್ಯ' ಚಿತ್ರಕ್ಕೆ ಉಪೇಂದ್ರ ಅವರೊಂದಿಗೆ ನಾಯಕಿಯಾಗಿ ನಟಿಸಲು ದೀಪಿಕಾ ಪಡುಕೋಣೆ ಅವರನ್ನು ಇಂದ್ರಜಿತ್ ಕರೆತಂದಿದ್ದರು. ಇದು ದೀಪಿಕಾ ಮೊದಲ ಸಿನಿಮಾ. ನಂತರ ದೀಪಿಕಾ ಹಿಂದಿಯ ಸ್ಟಾರ್ ಹೀರೋಯಿನ್ ಪಟ್ಟ ಗಳಿಸಿದ್ದು ಈಗ ಇತಿಹಾಸ .
2002 ರಲ್ಲಿ ಬಿಡುಗಡೆಯಾದ 'ತುಂಟಾಟ', ಇಂದ್ರಜಿತ್ ನಿರ್ದೇಶನದ ಮೊದಲ ಸಿನಿಮಾ. ತಮ್ಮ ತಂದೆ ಲಂಕೇಶ್ ನಡೆಸುತ್ತಿದ್ದ ಲಂಕೇಶ್ ಪತ್ರಿಕೆ ಹೆಸರಲ್ಲಿ ಕೂಡಾ ಅವರು ಸಿನಿಮಾ ಮಾಡಿದ್ದು ಈ ಚಿತ್ರದಲ್ಲಿ ದರ್ಶನ್ ನಾಯಕನಾಗಿ ನಟಿಸಿದ್ದರು. 'ಮೊನಾಲಿಸಾ', 'ಹುಡುಗ ಹುಡುಗಿ', 'ದೇವ್ ಸನ್ ಆಫ್ ಮುದ್ದೇಗೌಡ' ಸಿನಿಮಾಗಳ ನಿರ್ದೇಶನ ಹಾಗೂ ಯಶಸ್ಸಿನಿಂದ ಇಂದ್ರಜಿತ್ ಸ್ಟಾರ್ ನಿರ್ದೇಶಕನ ಪಟ್ಟ ಅಲಂಕರಿಸಿದರು.
ಇದೀಗ 'ದಿ ಶಕೀಲಾ' ಚಿತ್ರವನ್ನು ನಿರ್ದೇಶಿಸಿರುವ ಇಂದ್ರಜಿತ್ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಇದು ಮ್ಯೂಜಿಕ್ ಸಿನಿಮಾಸ್ ಬ್ಯಾನರ್ ಅಡಿ ತಯಾರಾದ ಸಿನಿಮಾ. ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ ಸಿನಿಮಾ ಹೆಚ್ಚು ನೋಡುಗರನ್ನು ತಲುಪುವ ಸಾಧ್ಯತೆ ಇದೆ. ಕನ್ನಡದ 'ಭಿನ್ನ' ಸಿನಿಮಾ ಈಗಾಗಲೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಆಗಿದ್ದು 190 ದೇಶಗಳಲ್ಲಿ ವೀಕ್ಷಕರು ಏಕಕಾಲದಲ್ಲಿ ಸಿನಿಮಾ ನೋಡಿರುವುದು ತಿಳಿದ ವಿಚಾರ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಗೆ ಒಟಿಟಿ ಸೂಕ್ತ ಮಾರ್ಗ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇನ್ನು ಜುಲೈ 17 ರಂದು ರಾತ್ರಿ 12 ಗಂಟೆಗೆ ಅಮೆಜಾನ್ ಪ್ರೈಂನಲ್ಲಿ ಪಿಆರ್ಕೆ ಪ್ರೊಡಕ್ಷನ್ಸ್ ಅಡಿ ತಯಾರಾದ 'ಲಾ' ಹಾಗೂ 24 ರಂದು ಪಿಆರ್ಕೆ ಅವರ 'ಫ್ರೆಂಚ್ ಬಿರ್ಯಾನಿ' ಕೂಡಾ ಬಿಡುಗಡೆಯಾಗುತ್ತಿದೆ.