ದೇವನಹಳ್ಳಿ(ಬೆಂಗಳೂರು) : ರಾಜಮಂಡ್ರಿಯಿಂದ ತಿರುಪತಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದರಿಂದ ಕೆಲವು ಗಂಟೆಗಳ ಕಾಲ ಗೊಂದಲ ಉಂಟಾಗಿದ್ದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕಿ ರೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಮಾನದಲ್ಲೇ ವಿಡಿಯೋ ಮಾಡಿರುವ ಅವರು, ಸೆಕ್ಯೂರಿಟಿ ನೆಪ ಹೇಳಿ ಪ್ರಯಾಣಿಕರಿಂದ ₹5 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಇಂಡಿಗೋ ವಿಮಾನಯಾನದ ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ.
ವಿಮಾನದಲ್ಲಿ ರೋಜಾ ಸೇರಿದಂತೆ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 10:30ಕ್ಕೆ ವಿಮಾನ ತಿರುಪತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗಿದ್ದು ರೋಜಾ ಅಸಮಾಧಾನಕ್ಕೆ ಕಾರಣವಾಗಿದೆ.
ವಿಮಾನ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿ ಸಿಬ್ಬಂದಿ ಸುಮಾರು 4 ರಿಂದ 5 ಗಂಟೆ ವಿಮಾನದಲ್ಲಿಯೇ ಇರಿಸಿ ಪ್ರಯಾಣಿಕರ ಪ್ರಾಣದ ಜೊತೆ ಆಟವಾಡಿದ್ದಾರೆ ಎಂದು ಆರೋಪ ಮಾಡಿರುವ ನಟಿ ರೋಜಾ, ಈ ಸಂಬಂಧ ಸಿಬ್ಬಂದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಗುಡುಗಿದ್ದಾರೆ.