ರಿಯಲ್ ಸ್ಟಾರ್ ಉಪೇಂದ್ರ, ಗುಳಿಕೆನ್ನೆ ಬೆಡಗಿ ರಚಿತಾ ರಾಮ್, ಸೋನು ಗೌಡ ಅಭಿನಯದ ‘ಐ ಲವ್ ಯು’ ಚಿತ್ರ ಬಿಡುಗಡೆಯಾದ ಮಾರನೇ ದಿನವೇ ಸಕ್ಸಸ್ ಮೀಟ್ ಘೋಷಿಸಿಕೊಂಡು, ಕೆಲವರ ಹುಬ್ಬೇರುವಂತೆ ಮಾಡಿತ್ತು. ಒಂದೇ ದಿನದಲ್ಲಿ ಸಿನಿಮಾದ ಗೆಲುವು ಹೇಗೆ ನಿರ್ಧರಿಸಲು ಸಾಧ್ಯ ಎನ್ನುವುದು ಹಲವರ ಪ್ರಶ್ನೆಯಾಗಿತ್ತು.ಈ ಪ್ರಶ್ನೆಗೆ ಚಿತ್ರತಂಡ ಉತ್ತರ ನೀಡಿದೆ.
ಚಿತ್ರದ ನಿರ್ದೇಶಕ ಆರ್.ಚಂದ್ರು ಎರಡನೇ ವಾರಕ್ಕೆ ಕಾಲಿಟ್ಟಿರುವ 'ಐ ಲವ್ ಯು'(ಕನ್ನಡ-ತೆಲುಗು)ಸಿನಿಮಾ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದಿದ್ದಾರೆ. ಕರ್ನಾಟಕದಲ್ಲಿ 250, ಆಂಧ್ರ ಹಾಗೂ ತೆಲಂಗಾಣದ 100ಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಈ ಕಲೆಕ್ಷನ್ ಆಗಿದೆಯಂತೆ. ಇದರಲ್ಲಿ ಅರ್ಧಕ್ಕರ್ಧ ಬಾಡಿಗೆ ಕೊಟ್ಟರೂ ನಿರ್ಮಾಪಕರ ಶೇರ್ 10 ಕೋಟಿ ರೂ ದಾಟುತ್ತದೆ. ಉಪೇಂದ್ರ ಅವರ ಈ ಹಿಂದಿನ ಕೆಲವು ಸಿನಿಮಾಗಳು ಪಲ್ಟಿ ಹೊಡೆದಿದ್ದವು. ಉಪ್ಪಿ ಹಾಗೂ ಚಂದ್ರು ಅವರ ಚೊಚ್ಚಲ ಕಾಂಬಿನೇಷನ್ ಚಿತ್ರ ‘ಬ್ರಹ್ಮ’ ಸಹ ಇಷ್ಟೊಂದು ಗಳಿಕೆ ಆಗಿರಲಿಲ್ಲ.
ಆರ್.ಚಂದ್ರು ಅವರ ಸಿನಿಮಾ ಪ್ರೀತಿಯನ್ನು ಗಾಂಧಿನಗರ ಅಪಾರವಾಗಿ ಕೊಂಡಾಡುತ್ತಿದೆ. ರಾಜಕುಮಾರ್ ಸಂಸ್ಥೆ,ವಿ.ರವಿಚಂದ್ರನ್,ರಾಕ್ಲೈನ್ ವೆಂಕಟೇಶ್, ದ್ವಾರಕೀಶ್ ರೀತಿ ಆರ್.ಚಂದ್ರು ಸಹ ಸಿನಿಮಾಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಅಪಾರವಾಗಿ ಖರ್ಚು ಮಾಡಿ ಅದಕ್ಕೆ ತಕ್ಕ ಪ್ರಚಾರ ಸಹ ಮಾಡಿ, ಸಿನಿಮಾವನ್ನು ಗೆಲುವಿನ ದಿಕ್ಕಿಗೆ ಚಂದ್ರು ತೆಗೆದುಕೊಂಡು ಹೋಗುವುದು ಈಗ ಸ್ಪಷ್ಟವಾಗಿ ಗೋಚರವಾಗಿದೆ.