ಕನ್ನಡ ಚಿತ್ರರಂಗದ ಕಲಾತಪಸ್ವಿ ರಾಜೇಶ್ ಇನ್ನಿಲ್ಲ. ಡಾ ರಾಜ್ಕುಮಾರ್ ಕಾಲದ ಪಂಕ್ತಿಯ ನಟರಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟ ರಾಜೇಶ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ನಿಜನಾಮ ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ ರಂಗಭೂಮಿ ಪ್ರವೇಶಿಸಿದರು.
ತಂದೆ, ತಾಯಿಗೆ ಗೊತ್ತಿಲ್ಲದಂತೆ ಸುದರ್ಶನ ನಾಟಕ ಮಂಡಳಿ ಸೇರಿದ ಮುನಿ ಚೌಡಪ್ಪ ಆ ನಂತರ ರಂಗಭೂಮಿಯಲ್ಲಿ ವಿದ್ಯಾಸಾಗರ್ ಹೆಸರಿನಿಂದ ಗುರುತಿಸಿಕೊಂಡರು. ಬಳಿಕ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನ ಕಟ್ಟಿದರು. ನಿರುದ್ಯೋಗಿ ಬಾಳು, ‘ಬಡವನ ಬಾಳು’, ‘ವಿಷ ಸರ್ಪ’, ‘ನಂದಾ ದೀಪ’, ‘ಚಂದ್ರೋದಯ’, ‘ಕಿತ್ತೂರು ರಾಣಿ ಚೆನ್ನಮ್ಮ’ ಮುಂತಾದ ನಾಟಕಗಳ ಮೂಲಕ ಆ ಕಾಲದಲ್ಲಿ ರಾಜೇಶ್ ಅವರು ಎಲ್ಲರ ಗಮನ ಸೆಳೆದಿದ್ದರು.
ಇದರ ನಡುವೆ ನಟನಾಗುವ ಇಚ್ಛೆ ಹೊಂದಿದ್ದ ರಾಜೇಶ್ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸ ಆರಂಭಿಸಿದರು. ಆದರೆ ಅಷ್ಟರಲ್ಲಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವಿದ್ಯಾಸಾಗರ್ ಅವರನ್ನು 'ವೀರ ಸಂಕಲ್ಪ' ಸಿನಿಮಾದ ಮೂಲಕ ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ತಮ್ಮ ಕೆಲಸಕ್ಕೆ 15 ದಿನ ರಜೆ ಹಾಕಿ ಮದ್ರಾಸ್‌ಗೆ ತೆರಳಿದ ವಿದ್ಯಾಸಾಗರ್ ವೀರ ಸಂಕಲ್ಪ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ವಿದ್ಯಾಸಾಗರ್‌ಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು.
ಇನ್ನು 'ಶ್ರೀ ರಾಮಾಂಜನೇಯ ಯುದ್ಧ' ಮತ್ತು 'ಗಂಗೆ ಗೌರಿ' ಚಿತ್ರಗಳಲ್ಲೂ ವಿದ್ಯಾಸಾಗರ್ ಅಭಿನಯಿಸಿದರು. 1968ರಲ್ಲಿ ತೆರೆಕಂಡ 'ನಮ್ಮ ಊರು' ಚಿತ್ರದಲ್ಲಿ ತಮ್ಮ ಹೆಸರನ್ನು ವಿದ್ಯಾಸಾಗರ್ ಇಂದ ರಾಜೇಶ್ ಎಂದು ಬದಲಾಯಿಸಿಕೊಂಡರು.
ರಾಜೇಶ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಚಿತ್ರ 'ನಮ್ಮ ಊರು'. ಸಿ.ವಿ.ಶಿವಶಂಕರ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದರು. ಈ ಸಿನಿಮಾದಿಂದ ರಾಜೇಶ್ ಅವ್ರಿಗೆ 'ಕಲಾತಪ್ಪಸ್ವಿ' ಅಂತಾ ಬಿರುದು ಬಂತು ಅಂತಾ ಹೇಳಲಾಗುತ್ತೆ.
ಈ ಚಿತ್ರದ ಯಶಸ್ಸಿನ ನಂತರ ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ ಕಾಣಿಕೆ, ಬೃಂದಾವನ, ಸುಖ ಸಂಸಾರ, ದೇವರ ಮಕ್ಕಳು, ಪೂರ್ಣಿಮಾ, ನಮ್ಮ ಬದುಕು, ಭಲೇ ಅದೃಷ್ಟವೋ ಅದೃಷ್ಟ, ಭಲೇ ಭಾಸ್ಕರ, ಹೆಣ್ಣು ಹೊನ್ನು ಮಣ್ಣು, ವಿಷ ಕನ್ಯೆ, ಕ್ರಾಂತಿ ವೀರ, ಬಿಡುಗಡೆ, ಊರ್ವಶಿ, ದೇವರ ಗುಡಿ, ಕಾವೇರಿ ಬದುಕು ಬಂಗಾರವಾಯಿತು, ದೇವರ ದುಡ್ಡು, ಸೊಸೆ ತಂದ ಸೌಭಾಗ್ಯ, ಚದುರಿದ ಚಿತ್ರಗಳು, ವಸಂತ ನಿಲಯ, ಕಲಿಯುಗ, ದೇವರ ಮನೆ, ತವರು ಮನೆ, ತವರು ಮನೆ ಉಡುಗೊರೆ ಮುಂತಾದ ಚಿತ್ರಗಳಲ್ಲಿ ರಾಜೇಶ್ ಅಭಿನಯಿಸಿದರು. ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ರಾಜೇಶ್ ಕನ್ನಡಿಗರ ಮನ ಗೆದ್ದಿದ್ದಾರೆ.
ಇದನ್ನೂ ಓದಿ: 50 ವರ್ಷ ಕಲಾ ಸೇವೆ..ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಲಾತಪಸ್ವಿ ರಾಜೇಶ್..
ಇನ್ನು ನಿರ್ದೇಶಕ ಗೀತಪ್ರಿಯ ನಿರ್ದೇಶನದ 'ಬೆಳುವಲದ ಮಡಿಲಲ್ಲಿ' ಚಿತ್ರ ರಾಜೇಶ್ ಬದುಕಿನ ಶ್ರೇಷ್ಠ ಚಿತ್ರ. ದೇವಿರಪ್ಪನವರ ಕಾದಂಬರಿಯನ್ನಾಧರಿಸಿದ ಈ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ಬೇರೆಯವರು ಆಯ್ಕೆಯಾಗಿದ್ದರು. ಆಗ ರಾಜೇಶ್ ಕಲ್ಪನಾ ಅವರ ಹೆಸ್ರನ್ನ ನಿರ್ದೇಶಕ ಗೀತಪ್ರಿಯ ಅವ್ರಿಗೆ ಸೂಚಿಸಿದ್ದರು. ಬೇಡವೆಂದರೂ ಗೀತಪ್ರಿಯ ಅವರ ಮನ ಒಲಿಸಿ ತಮ್ಮ ಚಿತ್ರದ ನಾಯಕಿಯನ್ನಾಗಿಸಿಕೊಂಡಿದ್ದರು. ಈ ಚಿತ್ರದ ನೋಟಕ್ಕೆ ನೋಟ ಬೆಸೆಯೋನೇ ಹಾಡನ್ನ ನೃತ್ಯ ನಿರ್ದೇಶಕರಿಲ್ಲದೇ ಕಲ್ಪನಾ ಜೊತೆ ಸೇರಿ ತಾವೇ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದರು ರಾಜೇಶ್.
ಇನ್ನೂ ಇದೇ ಚಿತ್ರದ ಸಂದರ್ಭದಲ್ಲಿ ಬಿಜ್ಜಲಿಯೆಂಬ ತಾಣದಲ್ಲಿ ಹಾಕಿದ್ದ ಹೊಗೆ ರಾಜೇಶ್ ಅವರ ಗಂಟಲನ್ನೇ ಕಿತ್ತುಕೊಂಡಿತ್ತು. ಮರಳಿ ಧ್ವನಿ ಬಾರದೆಂದಾಗ ರಾಜೇಶ್ ಮತ್ತು ಕುಟುಂಬದವರ ಜಂಗಾಬಲವೇ ಉಡಗಿ ಹೋಗಿತ್ತು. ಆಗ ಅವರ ಪಾಲಿಗೆ ಡಾ.ರುದ್ರೇಶ್ ಎಂಬುವವರು ದೇವರ ಸ್ವರೂಪದಲ್ಲಿ ಬಂದರು. ರಾಜೇಶ್ ಗೆ ಚಿಕಿತ್ಸೆಯನ್ನು ನೀಡಿದರು.
ಕನ್ನಡ ಚಿತ್ರರಂಗಕ್ಕೆ ರಾಜೇಶ್ ಅವರು ನೀಡಿರುವ ಅಪಾರ ಕೊಡುಗೆಗೆ ಕರ್ನಾಟಕ ವಿಶ್ವವಿದ್ಯಾಲಯ 2012ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅಂದ ಹಾಗೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ರಥಸಪ್ತಮಿ’ ಚಿತ್ರದಲ್ಲಿ ರಾಜೇಶ್ ಅವರ ಪುತ್ರಿ ಆಶಾರಾಣಿ ನಾಯಕಿಯಾಗಿ ಅಭಿನಯಿಸಿದ್ದರು. ಕನ್ನಡ ಹಾಗೂ ತಮಿಳಿನ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪತ್ನಿಯೇ ಆಶಾರಾಣಿ. ಅರ್ಜುನ್ ಸರ್ಜಾ ಮತ್ತು ಆಶಾರಾಣಿ ದಂಪತಿಯ ಪುತ್ರಿ ಐಶ್ವರ್ಯ ಸರ್ಜಾ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜೇಶ್ ಇದೀಗ ನೀವೇದಿತಾ ಅರ್ಜುನ್, ಪ್ರಿಯ ದರ್ಶನಿ, ರಾಜ, ರಘು ಹಾಗು ರೇಣು ಸೇರಿ ಐದು ಜನ ಮಕ್ಕಳನ್ನ ಅಗಲಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ