ಬೆಂಗಳೂರು : ಗುರುವಾರವಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯು ಹೊಸ ಚಿತ್ರದ ಪೋಸ್ಟರ್ವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಈ ಚಿತ್ರದ ಹೆಸರೇನು, ಯಾರು ನಟಿಸುತ್ತಾರೆ ಎಂಬ ವಿಷಯ ಜುಲೈ 11ರಂದು ಹೊಂಬಾಳೆ ಫಿಲಂಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಧ್ಯಾಹ್ನ 12.51ಕ್ಕೆ ಅನಾವರಣಗೊಳ್ಳಲಿದೆ.
ಗುರುವಾರ ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಸಮುದ್ರದಿಂದ ಎದ್ದು ಬಂದಂತಿರುವ ರಕ್ತಸಿಕ್ತ ಹೆಜ್ಜೆ ಗುರುತಿದ್ದು, ಅಲೆಗಳು ಸತ್ತವರನ್ನು ಎಳೆದು ತಂದರೆ ತೀರವೆಲ್ಲ ರಕ್ತವಾಗುತ್ತದೆ ಎಂಬ ಅರ್ಥಬರುವ ಟ್ಯಾಗ್ಲೈನ್ ಇದೆ. ಈ ಪೋಸ್ಟರ್ ನೋಡಿದವರೆಲ್ಲ ಈ ಚಿತ್ರ ಯಾವುದಿರಬಹುದು ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ.
ಈ ಚಿತ್ರದಲ್ಲಿ ನಟಿಸುವವರು ಯಾರು, ನಿರ್ದೇಶಕರು ಯಾರು ಎಂಬ ಕ್ಯೂರಿಯಾಸಿಟಿ ಎಲ್ರಲ್ಲೂ ಇದೆ. ಹೊಂಬಾಳೆ ಫಿಲಂಸ್ನ ವಿಜಯ್ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಸ್ನೇಹದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್ ವತಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರಿದಾಗಲೇ, ರಕ್ಷಿತ್ ಶೆಟ್ಟಿ ನಟಿಸುವ ಚಿತ್ರವನ್ನು ವಿಜಯ್ಕುಮಾರ್ ಕಿರಗಂದೂರು ನಿರ್ಮಾಣ ಮಾಡ್ತಾರೆ ಎಂಬ ಸುದ್ದಿ ಇತ್ತು.
ಹೀಗಾಗಿ, ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಾರಾ ಅನ್ನೋ ಪ್ರಶ್ನೆ ಸಿನಿಪ್ರಿಯರಲ್ಲಿ ಮೂಡಿದೆ. ಇನ್ನೂ ಕೆಲವರು ಈ ಪೋಸ್ಟರ್ ನೋಡಿ ಉಳಿದವರು ಕಂಡಂತೆ ಚಿತ್ರದ ಮುಂದಿನ ಭಾಗ ಇರಬಹುದು ಎಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ನಿರ್ದೇಶಕಿ ಸುಧಾ ಕೊಂಗರಾ ಅವರ ಹುಟ್ಟುಹಬ್ಬಕ್ಕೂ ಹೊಂಬಾಳೆ ಫಿಲಂಸ್ ಸಂಸ್ಥೆಯು ಶುಭಕೋರಿತ್ತು. ಹಾಗಾಗಿ, ಸುಧಾ ಕೊಂಗರಾ ಈ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವೆಲ್ಲ ಊಹಾಪೋಹಗಳಷ್ಟೇ. ಹೊಂಬಾಳೆ ಫಿಲಂಸ್ನ 10ನೇ ಚಿತ್ರ ಯಾವುದು? ಯಾರು ನಿರ್ದೇಶಿಸುತ್ತಾರೆ ಎಂದು ಗೊತ್ತಾಗಬೇಕಿದ್ದರೆ, ಭಾನುವಾರ ಮಧ್ಯಾಹ್ನದವರೆಗೂ ಕಾಯಲೇಬೇಕು.