ಬೆಂಗಳೂರು: ಸ್ಯಾಂಡಲ್ವುಡ್ನ ಹಾಸ್ಯನಟ ಬುಲೆಟ್ ಪ್ರಕಾಶ್ ನಿನ್ನೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಿದ್ದಂತೆ ಕಲ್ಲು ಹೃದಯವೂ ಕರಗುವ ಸನ್ನಿವೇಶ ನಡೆಯಿತು.
ಪ್ರಕಾಶ್ ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮರಿಗೆ ಟೈಸನ್ ಎಂದು ಹೆಸರಿಟ್ಟಿದರು. ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಿದ್ದಂತೆ ತಾನು ಅತ್ಯಂತ ಪ್ರೀತಿಯಿಂದ ಸಾಕಿದ್ದ ಟೈಸನ್ ರುದ್ರಭೂಮಿಯಲ್ಲಿ ಶವ ಪೆಟ್ಟಿಗೆ ಮೇಲೇರಿ ಕುಳಿತುಕೊಂಡಿತು. ಈ ಮೂಲಕ ತನ್ನ ಒಡೆಯನನ್ನು ಎಲ್ಲಿಗೂ ಕೊಂಡೊಯ್ಯದಂತೆ ತನ್ನ ಕೈಲಾದ ಮಟ್ಟಿಗೆ ತಡೆಯೊಡ್ಡಿತು. ಒಡೆಯನ ಸಾವಿನಿಂದ ಆತಂಕಕ್ಕೊಳಗಾಗಿದ್ದ ನಾಯಿ ಯಜಮಾನನ ಅಂತ್ಯ ಸಂಸ್ಕಾರದ ವೇಳೆ ಮಮ್ಮಲ ಮರುಗಿತು.
ಟೈಸನ್ ಎಂಬ ನಾಯಿಯನ್ನು ಬುಲೆಟ್ ಪ್ರಕಾಶ್ ಪ್ರಾಣಕ್ಕಿಂತ ತುಸು ಹೆಚ್ಚೇ ಪ್ರೀತಿಯಿಂದ ಸಾಕಿದ್ದರು. 'ನಾನು ಇಲ್ಲ ಅಂದರೆ ನನ್ನ ರೂಂ ಕಡೆ ಟೈಸನ್ ತಪ್ಪಿಯೂ ತಲೆ ಹಾಕುವುದಿಲ್ಲ. ನನ್ನ ಆಗಮನಕ್ಕಾಗಿ ಅದು ಕಾಯುತ್ತಿರುತ್ತದೆ ಎಂದು ಅವರು ಇತ್ತೀಚಿಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಶ್ವಾನ ತೋರುವ ಅದಮ್ಯ ಪ್ರೀತಿ ಹಾಗೂ ನಿಯತ್ತಿನ ಮುಂದೆ ಮನುಷ್ಯ ತಲೆಬಾಗಲೇಬೇಕು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.