ಜುಲೈ 12ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮದಿನವಾಗಿದ್ದು, ಈ ವರ್ಷವೂ ಕೂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಅವರು ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.
ಕೊರೊನಾ ಎರಡನೇ ಅಲೆಯಿಂದ ಕನ್ನಡ ಚಿತ್ರರಂಗದಲ್ಲಿನ ಚಟುವಟಿಕೆಗಳು ಎರಡೂವರೆ ತಿಂಗಳು ಸಂಪೂರ್ಣವಾಗಿ ಸ್ಥಗಿತವಾಗಿದ್ದವು. ಈ ಸಮಯದಲ್ಲಿ ಚಿತ್ರಮಂದಿರಗಳು, ಸಿನಿಮಾ ಚಿತ್ರೀಕರಣಗಳು ಸ್ಟಾಪ್ ಆಗಿದ್ದವು. ಈಗ ರಾಜ್ಯ ಸರ್ಕಾರ ಅನ್ಲಾಕ್ 3.O ಜಾರಿ ಮಾಡಿದ್ದು, ಚಿತ್ರಮಂದಿರ ಬಿಟ್ಟು, ಎಲ್ಲ ಕ್ಷೇತ್ರಗಳಿಗೆ ಹಂತಹಂತವಾಗಿ ಅವಕಾಶ ನೀಡಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಹಾವಳಿ ಇನ್ನೂ ಇರುವುದರಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವರ್ಷವೂ ಕೂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ. ಈ ಕಾರಣಕ್ಕೆ ನಾನು ಇದೇ ಜುಲೈ 12 ರಂದು ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ದಯಮಾಡಿ ಯಾರೂ ಕೂಡ ಮನೆ ಹತ್ತಿರ ಬರಬೇಡಿ ಅಂತಾ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ನನ್ನ ಹುಟ್ಟು ಹಬ್ಬದ ದಿನ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ದಯವಿಟ್ಟು ಯಾರು ತಪ್ಪು ತಿಳಿದುಕೊಳ್ಳಬೇಡಿ ಅಂತ ಹ್ಯಾಟ್ರಿಕ್ ಹೀರೋ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ಈ ಕೊರೊನಾ ಮುಗಿದ ಮೇಲೆ ನಿಮ್ಮನ್ನು ಭೇಟಿ ಮಾಡುತ್ತೇನೆಂದು ತಿಳಿಸಿದ್ದಾರೆ.