ಕನ್ನಡ ಚಿತ್ರರಂಗ ಅಲ್ಲದೇ ತೆಲುಗು, ತಮಿಳು, ಕೊಂಕಣಿ, ಮಲಯಾಳಂ, ತುಳು ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಹರ್ಷಿಕಾ ಪೂಣಚ್ಚ ಸದ್ಯ ಕೊರೊನಾ ಸಮಯದಲ್ಲಿ ಭುವನಂ ಫೌಂಡೇಶನ್ ವತಿಯಿಂದ ಕೊರೊನಾ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಹೆಸರುವಾಸಿಯಾಗಿದ್ದಾರೆ. ಸದ್ಯ ನಟಿ ಅಭಿನಯಿಸುತ್ತಿರುವ ಭೋಜ್‌ಪುರಿಯ 'ಹಮ್ ಹೈ ರಹಿ ಪ್ಯಾರ್ ಕೆ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಚಿತ್ರದ ಅನುಭವದ ಬಗ್ಗೆ ಹರ್ಷಿಕಾ ಪೂಣಚ್ಚ ಮನಬಿಚ್ಚಿ ಮಾತನಾಡಿದ್ದಾರೆ.
ಇದು ಹರ್ಷಿಕಾ ಅಭಿನಯದ ಮೊದಲ ಭೋಜ್‌ಪುರಿ ಸಿನಿಮಾವಾಗಿದ್ದು, ಸೂಪರ್ ಸ್ಟಾರ್ ಪವನ್ ಸಿಂಗ್ ಜೊತೆ ಕೊಡಗಿನ ಹುಡುಗಿ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಭೋಜ್‌ಪುರಿ ಭಾಷೆಯ ಸಿನಿಪ್ರಿಯರಿಗೆ ಹರ್ಷಿಕಾ ಪರಿಚಯವಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಕೂಡಾ ಗಳಿಸಿದ್ದಾರೆ. ಹಮ್ ಹೈ ರಹಿ ಪ್ಯಾರ್ ಕೆ ಚಿತ್ರದಲ್ಲಿ ಹರ್ಷಿಕಾ ಶ್ರೀಮಂತ ಮನೆತನದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಭೋಜ್‌ಪುರಿ ಭಾಷೆ ಜೊತೆಗೆ ಹಿಂದಿಯಲ್ಲೂ ಬಿಡುಗಡೆಯಾಗಲಿದೆ ಅಂತಾ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ಈ ಚಿತ್ರವನ್ನು ಯಾಶಿ ಪ್ರೊಡಕ್ಷನ್ ಬ್ಯಾನರ್ ಅಡಿ ಅಭಯ್ ಸಿನ್ಹಾ ನಿರ್ಮಿಸುತ್ತಿದ್ದು, ಪ್ರೇಮಾಂಶು ಸಿಂಗ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಭೋಜ್‌ಪುರಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಈ ಕೊರೊನಾ ಅಲೆಗಳು ಮುಗಿದ ಮೇಲೆ ಹರ್ಷಿಕಾ ಪೂಣಚ್ಚ ಅಭಿನಯಿಸಿರುವ ಭೋಜ್‌ಪುರಿ ಚಿತ್ರ ತೆರೆಗೆ ಬರಲಿದೆ.ಇನ್ನು ಹಮ್ ಹೈ ರಹಿ ಪ್ಯಾರ್ ಕೆ ಚಿತ್ರದಲ್ಲಿ ನಟಿ ಅಭಿನಯ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. https://youtu.be/68TTrEA9luM