ಕನ್ನಡದ ಪ್ರಾಚೀನ ಕೃತಿಯಾದ ‘ಯಶೋಧರ ಚರಿತೆ’ಯ ಪ್ರಸಂಗ ಆಧರಿಸಿ ಸಿದ್ಧವಾಗಿರುವ ‘ಅಮೃತಮತಿ’ ಚಿತ್ರಕ್ಕೆ ಈಗ ಮತ್ತೊಂದು ಪ್ರಶಸ್ತಿ ಬಂದಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿರುವ ಈ ಸಿನಿಮಾ ಹಾಲಿವುಡ್ ಅಂತಾರಾಷ್ಟ್ರೀಯ ಗೋಲ್ಡನ್ ಏಜ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.
ಈ ಚಿತ್ರೋತ್ಸವದಲ್ಲಿ ತಮ್ಮ ಅದ್ಭುತ ನಟನೆಗಾಗಿ ಹರಿಪ್ರಿಯಾಗೆ ಶ್ರೇಷ್ಠನಟಿ ಪ್ರಶಸ್ತಿ ಸಿಕ್ಕಿದೆ. ಇದಕ್ಕೂ ಮುಂಚೆ ನೋಯ್ಡಾದ ಎರಡು ಸಂಸ್ಥೆಗಳು ನಡೆಸಿದ ಎರಡು ಪ್ರತ್ಯೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಹರಿಪ್ರಿಯ ಅವರು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಒಟ್ಟು ಮೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರು ಶ್ರೇಷ್ಠ ನಟಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಈ ಸಿನಿಮಾವನ್ನು ಬರಗೂರು ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ ಸಿನಿಮಾ ‘ಶ್ರೇಷ್ಠ ವಿದೇಶಿ ಭಾಷಾ ಚಿತ್ರ’ವೆಂಬ ಪ್ರಶಸ್ತಿಗಳಿಸಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಈ ಸಿನಿಮಾಗೆ ಶ್ರೇಷ್ಠ ಚಿತ್ರ ಮತ್ತು ಬರಗೂರ ಅವರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು.
ಈ ಚಿತ್ರಕ್ಕೆ ಸಂಕಲನಕಾರರಾಗಿ ಸುರೇಶ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತಾ ಮಲ್ನಾಡ್ ಕಾರ್ಯ ನಿರ್ವಹಿಸಿದ್ದಾರೆ. ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾರಾವ್, ವತ್ಸಲಾಮೋಹನ್, ಅಂಬರೀಷ್ ಸಾರಂಗಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶೀಘ್ರವೇ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.