ಹೂಮಳೆ ಧಾರಾವಾಹಿಯು ಈಗಾಗಲೇ ಯಶಸ್ವಿ ನೂರು ದಿನ ಪೂರೈಸಿದೆ. ಲಹರಿ ಪಾತ್ರವನ್ನು ಜನ ಸ್ವೀಕರಿಸಿದ್ದಾರೆ ಎಂಬುದಕ್ಕೆ ಅವರಿಂದು ನನ್ನನ್ನು ಲಹರಿಯಾಗಿ ಗುರುತಿಸುವುದೇ ಸಾಕ್ಷಿ. ಇದಕ್ಕಿಂತಲೂ ಮೊದಲು ಜನ ರಾಜರಾಣಿ ಚುಕ್ಕಿ ಎಂದು ಕರೆಯುತ್ತಿದ್ದರು. ಮುಂದೆ ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸುತ್ತಿದ್ದರು. ಆದರೆ ಇದೀಗ ನನ್ನನ್ನು ಲಹರಿ ಎಂದೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಜನರ ಮನಸ್ಸಿಗೆ ತಟ್ಟಿದೆ. ಅವರ ಪ್ರೀತಿ ಕಂಡು ತುಂಬಾ ಖುಷಿಯಾಗುತ್ತದೆ ಎಂದು ಹೇಳುತ್ತಾರೆ ಚಂದನಾ ಅನಂತಕೃಷ್ಣ.
ರಾಜರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿಯಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ಚಂದನಾ ಜನಪ್ರಿಯತೆ ಪಡೆದಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನಾ ದೊಡ್ಮನೆಯಿಂದ ಬಂದ ಬಳಿಕ ನಿರೂಪಕಿಯಾಗಿ ಅವಕಾಶ ಪಡೆದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಹಾಡು ಕರ್ನಾಟಕದ ನಿರೂಪಕಿಯಾಗಿ ಮನ ಸೆಳೆದ ಚಂದನಾ ಸದ್ಯ ಹೂಮಳೆ ಧಾರಾವಾಹಿಯ ಲಹರಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.