'ಒಂದು ಮೊಟ್ಟೆ ಕಥೆ' ಖ್ಯಾತಿಯ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸುಜಯ್ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
'ಚಮಕ್', 'ಅಯೋಗ್ಯ', 'ಬೀರ್ ಬಲ್', 'ಜಾನ್ ಸೀನ' ಸಿನಿಮಾವನ್ನು ನಿರ್ಮಿಸಿರುವ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾವನ್ನು ನಿರ್ಮಿಸುತ್ತಿದೆ. ಈ ಸಿನಿಮಾದ ನಿರ್ದೇಶಕ ಸುಜಯ್ ಶಾಸ್ತ್ರಿ ಕೆಲವೊಂದು ಸಿನಿಮಾ, ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಮಯ ಸಿನಿಮಾ ಎಂದು ಚಿತ್ರತಂಡ ಹೇಳಿದೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ಕವಿತಾ ಗೌಡ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಾಜ್ಗೆ ನಾಯಕಿಯಾಗಿ ನಟಿಸಿದ್ದಾರೆ. 'ಅಮ್ಮಚ್ಚಿಯೆಂಬ ನೆನಪು' ಚಿತ್ರದ ನಂತರ ರಾಜ್ ಬಿ. ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಗುಬ್ಬಿ ಸಿನಿಪ್ರಿಯರ ಮೇಲೆ ಹೇಗೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತದೆ ಎಂಬುದನ್ನು ಸಿನಿಮಾ ಬಿಡುಗಡೆಯಾಗುವವರೆಗೂ ಕಾದು ನೋಡಬೇಕು.