ನವ ನಿರ್ದೇಶಕ ಗೋಪಾಲ್ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ 'ಗೋರಿ' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. 'ಪ್ರೀತಿಯ ಸಮಾಧಿ' ಎಂಬ ಕ್ಯಾಚಿ ಟ್ಯಾಗ್ಲೈನ್ ಮೂಲಕ ಗಾಂಧಿನಗರದ ಮಂದಿಯ ಗಮನ ಸೆಳೆದಿರುವ 'ಗೋರಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಅಥವಾ ಮ್ಯೂಟ್ ಇಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದೆ.
ಸದ್ಯ ಲಾಕ್ಡೌನ್ನಿಂದ ಚಿತ್ರಮಂದಿರಗಳು ಬಂದ್ ಆಗಿದ್ದು, ಸರ್ಕಾರ ಥಿಯೇಟರ್ ತೆರೆಯಲು ಆದೇಶ ನೀಡಿದ ಕೂಡಲೇ ಆಗಸ್ಟ್ನಲ್ಲಿ 'ಗೋರಿ' ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ 'ಗೋರಿ' ಚಿತ್ರದ ಹಾಡುಗಳು ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ. ಅಲ್ಲದೆ ಈ ಚಿತ್ರದ 'ಬ್ಯಾರೇನೆ ಐತಿ' ಸಾಂಗ್ ಕೇಳಿದ ಸಿನಿರಸಿಕರು ಚಿತ್ರದಲ್ಲಿ ಬೇರೆ ಏನೋ ಇದೆ ಎಂದು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಹಾವೇರಿ ಮೂಲದ ನಿರ್ದೇಶಕ ಗೋಪಾಲ್ ಕೃಷ್ಣ ತಮ್ಮ ಸ್ನೇಹಿತ, ಸಿನಿ ಪತ್ರಕರ್ತ ಕಿರಣ್ ಕನಸಿಗೆ ನೀರೆರೆದಿದ್ದಾರೆ. ಗೋಪಾಲ್ ಕೃಷ್ಣ ಅವರೇ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. 'ಗೋರಿ' ಪಕ್ಕಾ ಲವ್ ಸ್ಟೋರಿ ಹೊಂದಿರುವ ಸಿನಿಮಾ. ಜೊತೆಗೆ ಸ್ನೇಹಿತರ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಲು ನಿರ್ದೇಶಕ ಗೋಪಾಲ್ ಕೃಷ್ಣ ಹೊರಟಿದ್ದು, ಚಿತ್ರದ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ಹುಡುಗರ ಚೊಚ್ಚಲ ಪ್ರಯತ್ನಕ್ಕೆ ಕನ್ನಡ ಸಿನಿರಸಿಕರು ಯಾವ ರೀತಿ ಸ್ಪಂದಿಸಲಿದ್ದಾರೆ ಕಾದು ನೋಡಬೇಕು.
