ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದಶರಥ' ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. 'ಯುದ್ಧಕಾಂಡ' ಚಿತ್ರದ ನಂತರ ರವಿಚಂದ್ರನ್ ಈ ಚಿತ್ರದಲ್ಲಿ ಕರಿಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ಮಿಂಚಿದ್ದಾರೆ.
ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದು ನಿರೀಕ್ಷಿತ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಹಲವೆಡೆ ಚಿತ್ರ ನೋಡಿದ ಸಿನಿಪ್ರಿಯರು 'ದಶರಥನ' ಗುಣಗಾನ ಮಾಡಿದ್ದಾರೆ. ಇನ್ನು 'ದಶರಥ' ಚಿತ್ರಕ್ಕೆ ಎಂ.ಎಸ್. ರಮೇಶ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಬಹಳ ದಿನಗಳ ನಂತರ ಸೋನು ಅಗರ್ವಾಲ್ ಹಾಗೂ ಅಭಿರಾಮಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು 'ದಶರಥ' ಚಿತ್ರದಲ್ಲಿ ಕ್ರೇಜಿಸ್ಟಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
'ಯಾರ್ ಯಾರ್ ಗೋರಿ ಮೇಲೆ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಲಾಶ್ ಈ ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದು ನೋಡುಗರ ಗಮನ ಸೆಳೆದಿದ್ದಾರೆ. ಇನ್ನು ಅಭಿಲಾಶ್ ಜೊತೆ ಬಿಗ್ಬಾಸ್ ಖ್ಯಾತಿಯ ಮೇಘಶ್ರೀ ಕಾಣಿಸಿದ್ದಾರೆ. ನಗರದ ಸಂತೋಷ್ ಚಿತ್ರಮಂದಿರದಲ್ಲಿ ನಿರ್ದೇಶಕ ರಮೇಶ್, ನಟ ಅಭಿಲಾಶ್ ಹಾಗೂ ಮೇಘಶ್ರೀ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಂಭ್ರಮಿಸಿದರು. ಅಲ್ಲದೆ ಚಿತ್ರದಲ್ಲಿ ಸಂಭಾಷಣೆ ಪವರ್ಫುಲ್ ಆಗಿದ್ದು ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ಖುಶ್ ಆಗಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡ ರಾಜ್ಯಾದ್ಯಂತ ಪ್ರಮುಖ ಥಿಯೇಟರ್ಗಳಿಗೆ ಭೇಟಿ ನೀಡುವುದಾಗಿ ನಿರ್ದೇಶಕ ರಮೇಶ್ ಹೇಳಿದ್ದಾರೆ.