ಕಳೆದ 5 ದಿನಗಳಿಂದ ಕಾಣೆಯಾಗಿದ್ದ 'ಗ್ಲೀ' ಸಿನಿಮಾ ಖ್ಯಾತಿಯ ಹಾಲಿವುಡ್ ನಟಿ ನಯಾ ರಿವೇರಾ ಶವ ವೆಂಚುರ್ ಕೌಂಟಿಯ ಪಿರು ಎಂಬ ಸರೋವರದ ಬಳಿ ಪತ್ತೆಯಾಗಿದೆ. ನಯಾ ರಿವೇರಾಗೆ 33 ವರ್ಷ ವಯಸ್ಸಾಗಿತ್ತು. ಬುಧವಾರ ತಮ್ಮ 4 ವರ್ಷದ ಮಗನೊಂದಿಗೆ ಬೋಟಿಂಗ್ ತೆರಳಿದ್ದರು ಎನ್ನಲಾಗಿದೆ.
ಪೊಲೀಸರು ಅದು ನಯಾ ರಿವೇರಾ ಶವ ಎಂಬುದನ್ನು ಖಚಿತಪಡಿಸಿದ್ದಾರೆ. ಆದರೆ ಇದು ಆತ್ಮಹತ್ಯೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಿವೇರಾ ಪುತ್ರ ಬೋಟಿನಲ್ಲಿ ಒಬ್ಬನೇ ದೊರೆತ ನಂತರ ಜುಲೈ 8 ರಿಂದ ನಟಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ 5 ದಿನಗಳ ನಂತರ ನಟಿ ಶವ ಸರೋವರದ ಸಮೀಪ ಪತ್ತೆಯಾಗಿದೆ.
ಮೂಲಗಳ ಪ್ರಕಾರ ಬಾಡಿಗೆ ಬೋಟ್ ಒಂದರಲ್ಲಿ ನಯಾ ರಿವೇರಾ ತಮ್ಮ ಪುತ್ರನೊಂದಿಗೆ ದೋಣಿಯಲ್ಲಿ ತೆರಳುವಾಗ ಇಬ್ಬರೂ ಆಯ ತಪ್ಪಿ ನೀರಿನಲ್ಲಿ ಬಿದ್ದಿದ್ದಾರೆ. ರಿವೇರಾ ತನ್ನ ಶಕ್ತಿ ಮೀರಿ ಮಗನನ್ನು ಬೋಟ್ ಮೇಲೆ ತಲುಪಿಸುವ ಮೂಲಕ ಆತನನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲೇ ಉಸಿರುಗಟ್ಟಿ ಆಕೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಿವೇರಾ 'ಗ್ಲೀ' ಚಿತ್ರದ ಪಾತ್ರಕ್ಕಾಗಿ ಸ್ಕ್ರೀನ್ ಆ್ಯಕ್ಟರ್ ಗಿಲ್ಡ್ ಹಾಗೂ ಟೀನ್ ಚಾಯ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ ಗ್ಯ್ರಾಮಿ ಪ್ರಶಸ್ತಿಗಾಗಿ ಅನೇಕ ಬಾರಿ ನಾಮಿನೇಟ್ ಕೂಡಾ ಆಗಿದ್ದರು ಎನ್ನಲಾಗಿದೆ. ಕ್ಯಾಲಿಫೋರ್ನಿಯಾದ ವೆಲೆನ್ಸಿಯಾದಲ್ಲಿ ನಟಿಸಿದ ರಿವೇರಾ ಬಾಲ್ಯದಲ್ಲಿ ಇರುವಾಗಲೇ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ನಾಲ್ಕನೇ ವಯಸ್ಸಿನಲ್ಲಿ ಸಿಬಿಎಸ್ ಸಿಟ್ಕಾಮ್ ದಿ ರಾಯಲ್ ಫ್ಯಾಮಿಲಿ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅಷ್ಟೇ ಅಲ್ಲ ತಮ್ಮ 10ನೇ ವಯಸ್ಸಿಗೆ ಫ್ರೆಷ್ ಪ್ರಿನ್ಸ್ ಆಫ್ ಬೆಲ್ ಏರ್, ಫ್ಯಾಮಿಲಿ ಮ್ಯಾಟರ್ಸ್ ಹಾಗೂ ಬೇವಾಚ್ ಎಂಬ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು.
'ಗ್ಲೀ' ಚಿತ್ರದಲ್ಲಿ ನಟಿಸುವ ಮುನ್ನ ಅನೇಕ ಟಿವಿ ಸರಣಿಯಲ್ಲಿ ಕೂಡಾ ಅವರು ಕೆಲಸ ಮಾಡಿದ್ದರು. ರಿವೇರಾ ನಿಧನಕ್ಕೆ ಅಭಿಮಾನಿಗಳು ಹಾಗೂ ಹಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.