'ಕಾಡು' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಅಮರೀಶ್ ಪುರಿ..!
ಮೊಗ್ಯಾಂಬೋ ಖುಷ್ ಹುವಾ ಎಂಬ ಡೈಲಾಗ್ ಕೇಳುತ್ತಿದ್ದಂತೆ ಕಣ್ಣ ಮುಂದೆ ಬರುವುದು ಬಾಲಿವುಡ್ ನಟ ಅಮರೀಶ್ ಪುರಿ. ಇಂತಹ ಒಬ್ಬ ನಟನನ್ನು ಕನ್ನಡಕ್ಕೆ ಕರೆತಂದಿದ್ದು ಗಿರೀಶ್ ಕಾರ್ನಾಡ್. 1973 ರ 'ಕಾಡು' ಸಿನಿಮಾ ಮೂಲಕ ಅಮರೀಶ್ ಪುರಿಯನ್ನು ಕಾರ್ನಾಡ್ ಕನ್ನಡಕ್ಕೆ ಪರಿಚಯಿಸಿದರು. ಗಿರೀಶ್ ಕಾರ್ನಾಡ್ ಹಾಗೂ ಅಮರೀಶ್ ಪುರಿ ಸ್ನೇಹ ಶುರುವಾಗಿದ್ದೇ ಮರಾಠಿ ನಾಟಕದಿಂದ. ಈ ಸ್ನೇಹಕ್ಕೆ ಕಟ್ಟುಬಿದ್ದು ಗಿರೀಶ್ ಕಾರ್ನಾಡ್ ನಿರ್ದೇಶನದ 'ಕಾಡು' ಸಿನಿಮಾದಲ್ಲಿ ನಟಿಸಲು ಅಮರೀಶ್ ಒಪ್ಪಿಕೊಂಡರು. ಅಚ್ಚರಿ ವಿಷಯ ಎಂದರೆ ಸ್ವತಃ ಅಂಬರೀಷ್ ಪುರಿ ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ತಾವೇ ಧ್ವನಿ ಕೊಟ್ಟಿದ್ದರು. ಇದಾದ ಬಳಿಕ ಅಮರೀಶ್ ಪುರಿ ಕನ್ನಡದಲ್ಲಿ 2-3 ಸಿನಿಮಾಗಳಲ್ಲಿ ನಟಿಸಿದರು.
'ತಬ್ಬಲಿಯು ನೀನಾದೆ ಮಗನೆ' ಸಿನಿಮಾದಲ್ಲಿ ನಾಸಿರುದ್ದೀನ್ ಶಾ..!
1976ರಲ್ಲಿ ತೆರೆಕಂಡ ಶ್ಯಾಮ್ ಬೆನಗಲ್ ಅವರ ಹಿಂದಿಯ 'ಮಂಥನ್' ಸಿನಿಮಾದಲ್ಲಿ, ಬಾಲಿವುಡ್ ನಟ ನಾಸಿರುದ್ದೀನ್ ಶಾ ಹಾಗೂ ಗಿರೀಶ್ ಕಾರ್ನಾಡ್ ಒಟ್ಟಿಗೆ ನಟಿಸಿದ್ದರು. ಆ ನಂತರ ಎಸ್.ಎಲ್. ಭೈರಪ್ಪ ಅವರ ಕಾದಂಬರಿಯನ್ನು ಆಧರಿಸಿ ಬಂದ 'ತಬ್ಬಲಿಯು ನೀನಾದೆ ಮಗನೆ' ಸಿನಿಮಾಗೆ ನಾಸಿರುದ್ದೀನ್ ಶಾ ಅವರನ್ನು ಗಿರೀಶ್ ಕಾರ್ನಾಡ್ ಕನ್ನಡಕ್ಕೆ ಪರಿಚಯಿಸಿದರು. 1977ರಲ್ಲಿ ತೆರೆಕಂಡ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಲ್ಲದೆ ಹಲವು ಪ್ರಶಸ್ತಿಗಳನ್ನು ಪಡೆಯಿತು.
ಕಾರ್ನಾಡರಿಗೆ ಶ್ರದ್ಧಾಂಜಲಿ ಅರ್ಪಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ
ಕನ್ನಡ ಚಿತ್ರರಂಗಕ್ಕೆ ಗಿರೀಶ್ ಕಾರ್ನಾಡ್ ಸಲ್ಲಿಸದ ಸೇವೆ ಅಪಾರ. ಗಿರೀಶ್ ಕಾರ್ನಾಡರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ, ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಗಿರೀಶ್ ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪತ್ರದ ಮೂಲಕ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.