ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಗಟ್ಟಿಮೇಳ ಹಾಗೂ ಜೊತೆಜೊತೆಯಲಿ, ಉದಯ ವಾಹಿನಿಯಲ್ಲಿ ಸೇವಂತಿ ಹಾಗೂ ಕಸ್ತೂರಿ ನಿವಾಸ, ಕಾವ್ಯಾಂಜಲಿ ಹಾಗೂ ಮನಸಾರೆ ಧಾರಾವಾಹಿಗಳ ಮಹಾಸಂಗಮವಾಗಿತ್ತು. ಈ ವಿಭಿನ್ನ ತರಹದ ಪರಿಕಲ್ಪನೆಯನ್ನು ವೀಕ್ಷಕರು ಮೆಚ್ಚಿದ್ದರು.
ಇದೀಗ ಗೀತಾ-ಗೌರಿ ಸರದಿ! ಈ ವಾರಾಂತ್ಯದಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಲು ಗೀತಾ ಗೌರಿ ಜೊತೆಯಾಗಿ ಬರುತ್ತಿದ್ದಾರೆ. ಕನ್ಫ್ಯೂಸ್ ಆಗಬೇಡಿ, ಗೀತಾ ಗೌರಿ ಎನ್ನುವ ಹೊಸ ಧಾರಾವಾಹಿಯೇನೂ ಆರಂಭವಾಗುತ್ತಿಲ್ಲ. ಬದಲಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಹಾಗೂ ಗೀತಾ ಧಾರಾವಾಹಿಗಳ ಮಹಾಸಂಚಿಕೆ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಇದೇ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರ ಕಾಣಲಿರುವ ಮಹಾಸಂಚಿಕೆಯಲ್ಲಿ ಗೀತಾ ಗೌರಿ ಒಂದಾಗಲಿದ್ದಾರೆ.
ಮದುವೆಯಾಗಿದ್ದರೂ ಅದನ್ನು ವ್ಯಕ್ತಪಡಿಸಲಾಗದೇ, ಗಂಡನಿಂದ ದೂರವಿದ್ದು ಸನ್ಯಾಸಿ ಜೀವನ ನಡೆಸುತ್ತಿರುವ ಮಂಗಳಾ ಹಾಗೂ ರಾಜೀವರ ಮದುವೆ ವಿಷಯ ಇನ್ನಾದರೂ ಬಹಿರಂಗಗೊಳ್ಳುತ್ತಾ? ರಾಜೀವನ ಮನೆಯವರು ಮಂಗಳ ಗೌರಿಯನ್ನು ಸೊಸೆಯಾಗಿ ಒಪ್ಪುತ್ತಾರಾ? ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಾಜೀವನಿಗೆ ಮದುವೆಯಾಗಿದೆ ಎಂದು ತಿಳಿದರೆ ಸ್ನೇಹ ಸ್ಥಿತಿ ಏನಾಗಬಹುದು ಎಂಬ ಕುತೂಹಲ ಒಂದೆಡೆಯಾದರೆ, ವಿಜಯ್ ಮಾಡಿದ ಅನ್ಯಾಯಕ್ಕೆ ಬುದ್ಧಿ ಕಲಿಸಲು ಅವನನ್ನು ಮದುವೆಯಾಗಿ ಮನೆಗೆ ಬಂದಿರುವ ಗೀತಾಳ ಉದ್ದೇಶ ಫಲಿಸುತ್ತಾ? ಆಕೆ ವಿಜಯ್ನ ಬದಲಾಯಿಸುತ್ತಾಳಾ? ಎಂಬುದು ಇನ್ನೊಂದೆಡೆ.
ಒಟ್ಟಿನಲ್ಲಿ ಉತ್ತರ ದಕ್ಷಿಣದಂತಿರುವ ಗೀತಾ ಗೌರಿಯರ ಸಂಚಿಕೆ ಕುತೂಹಲ ಮೂಡಿಸಿದೆ.