ಕನ್ನಡ ಚಿತ್ರರಂಗದ ಹಿಟ್ ಕಾಂಬಿನೇಷನ್ನಲ್ಲಿ ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಸಹ ಒಂದು. ಮುಂಗಾರುಮಳೆಯಿಂದ ಪ್ರಾರಂಭವಾದ ಈ ಜೋಡಿಯ ಯಶಸ್ಸು, ಗಾಳಿಪಟದಲ್ಲಿ ಮತ್ತಷ್ಟು ಉತ್ತುಂಗಕ್ಕೇರಿತು. ಆ ನಂತರ ಬಿಡುಗಡೆಯಾದ ಮುಗುಳು ನಗೆ ಬಾಕ್ಸ್ ಆಫೀಸ್ನಲ್ಲಿ ಅಷ್ಟು ಸುದ್ದಿಯಾಗದಿದ್ದರೂ, ಟಿವಿಯಲ್ಲಿ ಬಿಡುಗಡೆಯಾದ ಮೇಲೆ ಜನಪ್ರಿಯವಾಗಿದೆ. ಇದೀಗ ಅವರಿಬ್ಬರೂ ಗಾಳಿಪಟ- 2 ಚಿತ್ರ ಮಾಡುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ.
'ಈ ಚಿತ್ರವು ನನ್ನ ಹಾಗೂ ಯೋಗರಾಜ್ ಭಟ್ ಅವರ ಬೆಸ್ಟ್ ಚಿತ್ರ ಆಗಲಿದೆ' ಎಂದು ಭವಿಷ್ಯ ನುಡಿಯುತ್ತಾರೆ ಗಣೇಶ್. ಇದುವರೆಗೂ ನಾಲ್ಕು ಚಿತ್ರಗಳನ್ನು ಮಾಡಿದ್ದೇವೆ. ಈ ಪೈಕಿ ಮೂರು ಚಿತ್ರಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರ ಬೆಸ್ಟ್ ಚಿತ್ರವಾಗಲಿದೆ ಎಂಬುದು ನನ್ನ ನಂಬಿಕೆ. ಅಷ್ಟು ಚೆನ್ನಾಗಿ ಮಾಡಿದ್ದಾರೆ ಭಟ್ಟರು ಅಂತಾರೆ ಗೋಲ್ಡನ್ ಸ್ಟಾರ್.
ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿದೆ. ಇದು ಇವತ್ತಿನ ಸ್ನೇಹ ಮತ್ತು ಸೆಂಟಿಮೆಂಟ್ ಕುರಿತಾದ ಚಿತ್ರ. ರೀಡಿಂಗ್ ಕೇಳುತ್ತಿದ್ದಂತೆಯೇ, ಏನ್ ಭಟ್ರೇ, ಬದಲಾಗಿಬಿಟ್ಟಿದ್ದೀರಿ ಎಂದೆ ಎಂದು ನೆನಪಿಸಿಕೊಳ್ಳುತ್ತಾರೆ ಗಣೇಶ್.
ಹೀಗೆ ಗಣೇಶ್ ಬಹಳ ನಿರೀಕ್ಷೆ ಇಟ್ಟಿರುವ ಈ ಚಿತ್ರವನ್ನು ನೋಡುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಏನಿಲ್ಲವೆಂದರೂ ಆರೆಂಟು ತಿಂಗಳುಗಳ ಕಾಲ ಕಾಯಲೇಬೇಕು. ಏಕೆಂದರೆ, ಸದ್ಯಕ್ಕೆ ಗಣೇಶ್ ಕೈಯಲ್ಲಿರುವ ಮೂರು ಚಿತ್ರಗಳ ಪೈಕಿ ಮೊದಲು ತ್ರಿಬಲ್ ರೈಡಿಂಗ್ ಬಿಡುಗಡೆಯಾಗುತ್ತದಂತೆ.ನಂತರ ಸಖತ್ ಬರಲಿದೆ. ಆ ನಂತರ ಗಾಳಿಪಟ 2 ಚಿತ್ರ ಬರಲಿದೆ.
ಚಿತ್ರಪ್ರದರ್ಶನ ಪ್ರಾರಂಭವಾಗಿ, ಅವೆರೆಡೂ ಚಿತ್ರಗಳು ಬಿಡುಗಡೆಯಾಗಿ, ಈ ಚಿತ್ರ ರಿಲೀಸ್ ಆಗಲು ಆರೇಳು ತಿಂಗಳಾದರೂ ಬೇಕು. ಅಲ್ಲಿಗೆ 2022ಕ್ಕೆ ಗಾಳಿಪಟ ಇನ್ನೊಮ್ಮೆ ಹಾರಲಿದೆ ಎಂದು ಹೇಳಬಹುದು.