ಕೆಲವೊಮ್ಮೆ ಸಿನಿಮಾಗಳಲ್ಲಿ ಪಾತ್ರದ ಬೆಳವಣಿಗೆ, ತಾಕತ್ತಿಗಿಂತ ಹೀರೋನ ದೇಹದ ಬೆಳವಣಿಗೆ ಮುಖ್ಯ ಆಗುತ್ತದೆ. ಇದೀಗ ನವೀನ್ ತೀರ್ಥಹಳ್ಳಿ ಎಂಬ ಯುವಕ ಕನ್ನಡದ ‘ರಾಜಲಕ್ಷ್ಮಿ’ ಸಿನಿಮಾಕ್ಕೆ ತನ್ನ ಮೈಕಟ್ಟು ಹುರಿಗೊಳಿಸಿ ಕ್ಯಾಮರಾ ಮುಂದೆ ಪ್ರತ್ಯಕ್ಷರಾಗಿದ್ದಾರೆ.
ರಾಮ ರಾಜ್ಯದಂತಿದ್ದ ಒಂದು ಊರು ಕಾರಣಾಂತರದಿಂದ ಹೇಗೆ ರಾವಣ ರಾಜ್ಯವಾಗಿ, ಮತ್ತೆ ಯಥಾಸ್ಥಿತಿಗೆ ಬರುತ್ತದೆ ಎಂಬುದು ಈ ಚಿತ್ರದ ಕಥಾ ಹಂದರ. ಇದರ ಜೊತೆ ಒಂದು ಲವ್ ಸ್ಟೋರಿ, ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳನ್ನು ಸೇರಿಸಿದ್ದಾರೆ ನಿರ್ದೇಶಕ ಶ್ರೀಕಾಂತ್. ಇವರೇ ರಾಜಲಕ್ಷ್ಮಿಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಾಗರಾಜ ಮೂರ್ತಿ ಛಾಯಾಗ್ರಹಣ, ಎ.ಟಿ ರವೀಶ್ ಸಂಗೀತಕ್ಕೆ ಕಾಂತರಾಜ್ ಹಾಡುಗಳನ್ನು ಬರೆದಿದ್ದಾರೆ. ಕಿರಣ್ ಅರ್ಜುನ್ ಸಂಕಲನ, ನವೀನ್ ಕನ್ನಡಿಗ ನೃತ್ಯ, ಸಂಕರ್ ಶಾಸ್ತ್ರಿ ಸಾಹಸ, ಮಾಗಡಿ ಯತೀಶ್ ಸಂಭಾಷಣೆ ಚಿತ್ರಕ್ಕಿದೆ.
ಇನ್ನು ನವೀನ್ ತೀರ್ಥಹಳ್ಳಿ ಜೊತೆ ರಶ್ಮಿ ಗೌಡ, ಚಂದ್ರ ಪ್ರಭಾ (ಮಜಾ ಭಾರತ ಖ್ಯಾತಿ), ಹೊನ್ನಾವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಸ್ಟೈಲ್ ಶಶಿ, ಸೀತಾರಾಂ, ಮುತ್ತುರಾಜ್, ಸದಾನಂದ್ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರದಲ್ಲಿರಲಿದೆ. ಮೋಹನ್ ಕುಮಾರ್ ಎಸ್.ಕೆ. ನಿರ್ಮಾಣ ಮಾಡುತ್ತಿರುವ ಈ ಚಿತ್ರ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಸುತ್ತ ಮುತ್ತ 25 ದಿವಸಗಳ ಚಿತ್ರೀಕರಣ ಮಾಡಿದೆ.