ಕೆಜಿಎಫ್ ಭಾರತೀಯ ಚಿತ್ರರಂಗ ಅಲ್ಲದೇ, ವಿದೇಶಗಳಲ್ಲೂ ಹೊಸ ಅಧ್ಯಾಯ ಬರೆದ ಸಿನಿಮಾ. ಕೆಜಿಎಫ್ ಪಾರ್ಟ್ ಒನ್ ನೋಡಿದ ಅಭಿಮಾನಿಗಳು ಯಾವಾಗ ಕೆಜಿಎಫ್ ಚಾಪ್ಟರ್-2 ಸಿನಿಮಾ ರಿಲೀಸ್ ಆಗುತ್ತೆ ಅಂತಾ ಕಾಯುತ್ತಿದ್ದಾರೆ.

ಕೊರೊನಾ ಬರುವುದಕ್ಕಿಂತ ಮುಂಚೆ ಕೆಜಿಎಫ್ ಚಾಪ್ಟರ್-2 ಇದೇ ವರ್ಷ ಅಕ್ಟೋಬರ್ನಲ್ಲಿ ತೆರೆ ಕಾಣೋದಿಕ್ಕೆ ರೆಡಿಯಾಗಿತ್ತು. ಸದ್ಯ ಗಾಂಧಿನಗರದಲ್ಲಿ ಸಿನಿಮಾ ಪಂಡಿತರು ಕೆಜಿಎಫ್ ಚಾಪ್ಟರ್-2 ಈ ವರ್ಷ ತೆರೆಗೆ ಬರೋದು ಡೌಟ್ ಎನ್ನುತ್ತಿದ್ದಾರೆ. ಕೊರೊನಾದಿಂದಾಗಿ ಬಾಕಿ ಇರುವ ಚಿತ್ರೀಕರಣ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೆಜಿಎಫ್ ಚಾಪ್ಟರ್-2 ಈ ವರ್ಷ ರಿಲೀಸ್ ಆಗೋದು ಡೌಟ್ ಎನ್ನಲಾಗಿದೆ. ಹೀಗಿದ್ರೂ ಕೂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾಕ್ಕೆ ಬಿಡುಗಡೆಗೂ ಮುನ್ನವ ಸಿಕ್ಕಾಪಟ್ಟೇ ಡಿಮ್ಯಾಂಡ್ ಬಂದಿದೆ.
ಓರ್ಮ್ಯಾಕ್ಸ್ ಮೀಡಿಯಾ ಸಂಸ್ಥೆ ಪ್ರತಿ ತಿಂಗಳು ಒಂದು ಸಮೀಕ್ಷೆ ನಡೆಸುತ್ತೆ. ಇದರಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಯಾವ್ಯಾವ ಸಿನಿಮಾಗಳಿಗೆ ಪ್ರೇಕ್ಷಕರು ಹೆಚ್ಚು ಕಾತುರದಿಂದ ಕಾಯುತ್ತಿದ್ದಾರೆ ಎಂಬ ಸಮೀಕ್ಷೆ ನಡೆಸಲಾಗುತ್ತೆ. ಅಚ್ಚರಿ ಸಂಗತಿ ಅಂದರೆ ಕಳೆದ ಫೆಬ್ರವರಿ ತಿಂಗಳಿನಿಂದ ಈ ಪಟ್ಟಿಯಲ್ಲಿ ರಾಕಿ ಬಾಯ್ನ ಕೆಜಿಎಫ್ ಚಾಪ್ಟರ್-2 ಸಿನಿಮಾ ಅಗ್ರ ಸ್ಥಾನದಲ್ಲಿದೆ. ಹಿಂದಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ, ಟಾಪ್ ಫೈವ್ ಸಿನಿಮಾಗಳಲ್ಲಿ ಹಿಂದಿ ವರ್ಷನ್ ಕೆಜಿಎಫ್ ಚಾಪ್ಟರ್-2 ಮೊದಲ ಸ್ಥಾನದಲ್ಲಿದೆ. ಗೋಲ್ ಮಾಲ್ 5, ಬ್ರಹ್ಮಾಸ್ತ್ರ, 83, ಲಾಲ್ ಸಿಂಗ್ ಚಡ್ಡಾ, ಸತ್ಯಮೇವ ಜಯತೇ ಸಿನಿಮಾಗಳ ಸಾಲಿನಲ್ಲಿ ಕೆಜಿಎಫ್ ಸಿನಿಮಾ ಈಗ ಅಗ್ರ ಸ್ಥಾನದಲ್ಲಿದೆ ಅಂತಾ ಸಮೀಕ್ಷೆ ಹೇಳಿದೆ.

ಹೀಗಾಗಿ ರಾಕಿಂಗ್ ಸ್ಟಾರ್ ಕೆಜಿಎಫ್ ಚಾಪ್ಟರ್-2 ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ ಎಂದು ವಿತರಕ ವಸೀಮ್ ಹೇಳಿದ್ದಾರೆ. ಕೆಜಿಎಫ್ ಮೊದಲ ಆವೃತ್ತಿಯ ಸಿನಿಮಾ 200 ಕೋಟಿಗೂ ಹೆಚ್ಚು ಗಳಿಸಿರುವ ಕಾರಣ ಈಗ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು ಕೋಟಿ-ಕೋಟಿ ಕೊಟ್ಟು ವಿತರಣೆ ಮಾಡಲು ಡಿಸ್ಟ್ರೂಬ್ಯೂಟರ್ ಬಂದಿದ್ದಾರೆ. ಕೆಜಿಎಫ್ ಸಿನಿಮಾವನ್ನ 20 ಕೋಟಿ ರೂಪಾಯಿ ಕೊಟ್ಟು ವಿತರಕರು ಕೋಟಿ-ಕೋಟಿ ಹಣ ಗಳಿಸಿದ್ರು. ಈಗ ಕೆಜಿಎಫ್ ಚಾಪ್ಟರ್-2 ಚಿತ್ರವನ್ನ ತೆಲುಗಿನಲ್ಲಿ ವಿತರಣೆ ಮಾಡಲು 40 ಕೋಟಿ, ತಮಿಳಿನಲ್ಲಿ 30 ಕೋಟಿ ಹಾಗೂ ಹಿಂದಿಯಲ್ಲಿ 100 ಕೋಟಿ ರೂಪಾಯಿ ಕೊಟ್ಟು, ಕೆಜಿಎಫ್ ಚಾಪ್ಟರ್-2 ಚಿತ್ರದ ವಿತರಣೆಯನ್ನ ಪಡೆಯಲು ವಿತರಕರು ಮುಂದೆ ಬಂದಿದ್ದಾರೆ ಎಂದು ವಾಸೀಮ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ್ ನ ವಿತರಕರು ಕೋಟಿ-ಕೋಟಿ ಕೊಟ್ಟು ಈ ಚಿತ್ರವನ್ನ ವಿತರಣೆ ಮಾಡಲು ಮುಂದೆ ಬಂದಿದ್ದಾರಂತೆ. ಆದರೆ, ಕೆಜಿಎಫ್ ಚಾಪ್ಟರ್-2 ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರ್ ಮಾತ್ರ ಚಿತ್ರದ ಟ್ರೈಲರ್ ಬಿಡುಗಡೆ ಆದ್ಮಲೇ ನಾನು ಬಿಜಿನೆಸ್ ಬಗ್ಗೆ ಮಾತನಾಡುವುದಾಗಿ ವಿತರಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.