ಈ ಲಾಕ್ ಡೌನ್ ಸಮಯದಲ್ಲಿ ಸಿನಿಮಾ ಚಟುವಟಿಕೆಗಳು ನಿಂತಿರುವಾಗ ಕೆಲವರು ತಮ್ಮದೇ ಆದ ಐಡಿಯಾಗಳನ್ನು ಮಾಡುವ ಮೂಲಕ ಚಿತ್ರರಂಗದಲ್ಲಿ ಹೊಸ ಪ್ರಯೋಗ ಮಾಡಲು ಹೊರಟರು. ಅದರಲ್ಲಿ ಬಹಳಷ್ಟು ಮಂದಿ ಯಶಸ್ವಿ ಕೂಡಾ ಆಗಿದ್ದಾರೆ.
ಲೂಸಿಯಾ, ಯುಟರ್ನ್ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಹುಟ್ಟು ಹಾಕಿದ 'ಎಫ್ ಯುಸಿ' (ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್) ಈಗ ಹಂತ ಹಂತವಾಗಿ ಬೆಳೆಯುತ್ತಿದೆ. ನಟರು ಮಾತ್ರವಲ್ಲ ಕೆಲವು ನಿರ್ದೇಶಕರು ಜೂಮ್ ಮೂಲಕ ವಿದೇಶಿ ಸಿನಿಮಾ ಆಸಕ್ತರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದ್ದಾರೆ. ನಿನ್ನೆ ಸಂಜೆ 5 ಘಂಟೆಗೆ ಎಫ್ಯುಸಿ ಮತ್ತೊಂದು ಉಪಯುಕ್ತ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸಿನಿಮಾಗಳಿಗೆ ಸೆನ್ಸಾರ್ ಆಗಬೇಕೆ, ಬೇಡವೇ ಎಂಬುದರ ಬಗ್ಗೆ ನಿನ್ನೆ ಫೇಸ್ಬುಕ್ ಲೈವ್ನಲ್ಲೇ ಚರ್ಚೆ ನಡೆದಿದೆ.
ಭಾರತೀಯ ಚಿತ್ರರಂಗದಲ್ಲಿ ಸೆನ್ಸಾರ್ ಮಂಡಳಿ ಏಕಸ್ವಾಮ್ಯ ಆಗಿಲ್ಲ ಎಂಬುದು ಬಹಳ ಹಿಂದಿನ ಕಾಲದ ಕೂಗು. ಸೆನ್ಸಾರ್ ಬೋರ್ಡ್ ಎಂದು ಬ್ರಿಟಿಷ್ ಕಾಲದಲ್ಲಿ ಇದ್ದದ್ದು ಸ್ವತಂತ್ಯ್ರ ಬಂದ ನಂತರ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಎಂದು ಬದಲಾಗಿದೆ. ಮಾಜಿ ಸೆನ್ಸಾರ್ ಅಧಿಕಾರಿ ಎ. ಚಂದ್ರಶೇಖರ್, ರಾಷ್ಟ್ರಪ್ರಶಸ್ತಿ ವಿಜೇತ ಕೆ. ಪುಟ್ಸ್ವಾಮಿ, ನಿರ್ದೇಶಕರಾದ ಎನ್.ಎಸ್. ಶಂಕರ್, ವಿಜಯಲಕ್ಷ್ಮಿ ಸಿಂಗ್, ಈಶ್ವರ್ ಪ್ರಸಾದ್ ಹಾಗೂ ಗುರುಪ್ರಸಾದ್ ಈ ಚರ್ಚೆಯಲ್ಲಿ ಭಾಗಿ ಆಗಿದ್ದಾರೆ.
ಹಿರಿಯ ಪತ್ರಕರ್ತ ಹಾಗೂ 'ಉಲ್ಟಾ ಪಲ್ಟಾ' ಸಿನಿಮಾ ನಿರ್ದೇಶಕ ಮಾಡಿದ ಎನ್.ಎಸ್. ಶಂಕರ್ ಈ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.