ಈ ಶುಕ್ರವಾರ ತೆರೆಗೆ ಬರುತ್ತಿರುವ ಕನ್ನಡದ ಮತ್ತು ಪರಭಾಷಾ ಸಿನಿಮಾಗಳ ಸಂಖ್ಯೆ ಬರೋಬ್ಬರಿ 45. ಈ ವಾರದಲ್ಲಿ ಬೆಂಗಳೂರಿನಲ್ಲಿ ಇಷ್ಟು ಸಿನಿಮಾಗಳು ಬಿಡುಗಡೆಯಾಗುವ ಮೂಲಕ ದಾಖಲೆ ಸೃಷ್ಟಿಯಾಗಿದೆ. ಇಷ್ಟರಲ್ಲಿ ಪರಭಾಷಾ ಚಿತ್ರಗಳೇ (35) ಮೇಲುಗೈ ಸಾಧಿಸಿವೆ. ಕನ್ನಡದ 10 ಸಿನಿಮಾಗಳು ಮಾತ್ರ ಅವುಗಳ ವಿರುದ್ಧ ಪೈಪೋಟಿ ಎದುರಿಸುತ್ತಿವೆ.
ಕನ್ನಡದ ಜತೆಗೆ ಹಿಂದಿ, ಇಂಗ್ಲೀಷ್, ತಮಿಳು, ತೆಲುಗು ಸೇರಿ 10 ಭಾಷೆಗಳ ಸಿನಿಮಾಗಳು ಇಂದು ತೆರೆಗೆ ಅಪ್ಪಳಿಸಿವೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಪರಭಾಷಿಕರೇ ಹೆಚ್ಚಿರುವುದು ಇದಕ್ಕೆ ಕಾರಣ. ಈ ವಾರ ಬಂಗಾಳಿ, ಭೋಜ್ಪುರಿ, ಗುಜರಾತಿ, ಪಂಜಾಬಿ, ಮರಾಠಿ ಸಿನಿಮಾಗಳು ಸಹ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿವೆ.
ಬೆಂಗಳೂರಿನಲ್ಲಿ 1.20 ಕೋಟಿ ಜನಸಂಖ್ಯೆಯ ಪೈಕಿ ಕೇವಲ 30 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ದಿನೇದಿನೆ ಅನ್ಯಭಾಷಿಗರ ಪ್ರಭಾವ ಹೆಚ್ಚಾಗುತ್ತಿರುವ ಕಾರಣ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹುಡುಕುವ ಪರಿಸ್ಥಿತಿಯಿದೆ. ಆದ್ದರಿಂದಲೇ ಈ ಪಾಟಿ ಸಿನಿಮಾಗಳು ತೆರೆಗೆ ಬರುತ್ತಿವೆ. ಅಲ್ಲದೆ, ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರಗಳೇ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಬೆಂಗಳೂರಿನಲ್ಲಿ 100 ಸಿಂಗಲ್ ಸ್ಕ್ರೀನ್ ಹಾಗೂ 40 ಮಲ್ಟಿಪ್ಲೆಕ್ಸ್ಗಳಿವೆ. ಕನ್ನಡ 10, ತೆಲುಗು 8, ಹಿಂದಿ ಹಾಗೂ ಬಂಗಾಳಿ ತಲಾ 6, ಮಳಯಾಳಂ 4, ತಮಿಳು ಹಾಗೂ ಇಂಗ್ಲಿಷ್ ತಲಾ 3, ಗುಜರಾತಿ ಹಾಗೂ ಮರಾಠಿ ತಲಾ 2, ಪಂಜಾಬಿ ಹಾಗೂ ಭೋಜ್ಪುರಿ ತಲಾ ಒಂದು ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪರಭಾಷಾ ಸಿನಿಮಾಗಳ ಪೈಪೋಟಿಯಿಂದಾಗಿ ಕನ್ನಡ ಚಿತ್ರಗಳ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಮಂಡಳಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಮೂಲಕ ಮಾತೃ ಭಾಷಾ ಸಿನಿಮಾಗಳಿಗೆ ಅನ್ಯಾಯ ಮಾಡುತ್ತಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ.