ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಖ್ಯಾತ ನಟಿ, ನಿರ್ಮಾಪಕಿ ,ಮಾಜಿ ಸಚಿವೆ ಜಯಮಾಲ ಗುಡುಗಿದ್ದಾರೆ. ಕೇಂದ್ರ ಸರ್ಕಾರದ ನೀತಿ ಪ್ರಸ್ತುತ ದೇಶವನ್ನೇ ಭಯದಲ್ಲಿ ಮುಳುಗಿಸಿರುವ ಕೊರೊನಾ ವೈರಸ್ಗಿಂತ ದೊಡ್ಡ ಆತಂಕ ಮೂಡಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿನ ಕಾಲದಲ್ಲಿ ಯಾರೂ ಕೂಡಾ ಮಕ್ಕಳು ಹುಟ್ಟಿದ ದಿನಾಂಕವನ್ನು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಪುಣ್ಯಕ್ಕೆ ನನ್ನ ತಂದೆ ನನ್ನ ಜನ್ಮ ದಿನಾಂಕವನ್ನು ಒಂದು ಸಿಗರೇಟ್ ಪ್ಯಾಕ್ ಹಿಂಭಾಗದಲ್ಲಿ ಬರೆದುಕೊಂಡಿದ್ದರು. ಆ ಕಾರಣದಿಂದ ನನ್ನ ಜನ್ಮ ದಿನಾಂಕ ನನಗೆ ಗೊತ್ತೇ ಹೊರತು, ಜನನ ಪ್ರಮಾಣ ಪತ್ರವನ್ನು ನಾನು ಎಲ್ಲಿಂದ ತರಲಿ ಎಂದು ಜಯಮಾಲ ಪ್ರಶ್ನಿಸಿದ್ದಾರೆ. ವಿಧಾನ ಪರಿಷತ್ತಿನ ವಿಶೇಷ ಚರ್ಚೆಯಲ್ಲಿ ಮಾತನಾಡುತ್ತಾ ಜಯಮಾಲ, ನಾನು ಓದಿದ್ದು ಚಿಕ್ಕಮಗಳೂರಿನಲ್ಲಿ. ನಾನು ಶಾಲೆಗೆ ಸೇರುವಾಗ ಸಿಗರೇಟ್ ಪ್ಯಾಕ್ ಮೇಲೆ ಬರೆದಿಟ್ಟುಕೊಂಡಿದ್ದ ನನ್ನ ಜನ್ಮ ದಿನಾಂಕವನ್ನು ಅಪ್ಪ ಶಾಲೆಗೆ ನೀಡಿದ್ದರು. ಪರಿಸ್ಥಿತಿ ಹೀಗಿರುವಾಗ ನನ್ನ, ನನ್ನ ತಂದೆ ಹಾಗೂ ಅಜ್ಜನ ಜನನ ಪತ್ರವನ್ನು ಎಲ್ಲಿಂದ ತರಲಿ ಎಂದು ಗುಡುಗಿದ್ದಾರೆ.
ಇಂತಹ ಪರಿಸ್ಥಿತಿ ಉಂಟು ಮಾಡಿರುವ ಕೇಂದ್ರ ಸರ್ಕಾರದ ನೀತಿ ಕೊರೊನಾ ವೈರಸ್ಗಿಂತ 10 ಪಟ್ಟು ಆತಂಕ ಮೂಡಿಸುತ್ತಿದೆ. ದೇಶದ ಕೋಟ್ಯಾಂತರ ಜನರ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಏಳು ಧರ್ಮಗಳಲ್ಲಿ ಒಂದು ಧರ್ಮವನ್ನು ಪ್ರತ್ಯೇಕ ಮಾಡಿದರೆ ನೋವಾಗುವುದಿಲ್ಲವೇ, ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅದಕ್ಕೆ ಎಲ್ಲರ ಒಪ್ಪಿಗೆ ಇರಬೇಕು ಎಂದು ಜಯಮಾಲ ಅಭಿಪ್ರಾಯ ವ್ಯಕ್ತಪಡಿಸಿದರು.