ಕನ್ನಡ ಚಿತ್ರರಂಗದಲ್ಲಿ ನಟರು ಗಾಯಕರಾಗುವ ವಾಡಿಕೆ ಡಾ. ರಾಜ್ ಕುಮಾರ್ ಕಾಲದಿಂದಲೂ ಇದೆ. ಇದೀಗ ದಿಯಾ ಸಿನಿಮಾ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಪೃಥ್ವಿ ಅಂಬರ್ ನಟನೆ ಜೊತೆಗೆ ಗಾಯಕರಾಗಿದ್ದಾರೆ.
ಹೌದು ಲೈಫ್ ಇಸ್ ಬ್ಯುಟಿಫುಲ್ ಚಿತ್ರಕ್ಕಾಗಿ ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಇದೇ ಮೊದಲ ಬಾರಿಗೆ ಗೀತೆಯೊಂದನ್ನು ಹಾಡಿದ್ದಾರೆ. ಖುಷಿಗಾಗಿ ಈವರೆಗೂ ಗುನುಗುತ್ತಿದ್ದವರು ಎಂಬ ಹಾಡನ್ನ ಪೃಥ್ವಿ ಸಖತ್ ಜೋಷ್ ನಿಂದ ಲೈಫ್ ಈಸ್ ಬ್ಯುಟಿಫುಲ್ ಸಿನಿಮಾದಲ್ಲಿ ಹಾಡಿದ್ದಾರೆ.
ಮೊದಲ ಬಾರಿಗೆ ಹಾಡಿರುವ ಪೃಥ್ವಿ ಅಂಬರ್ ಹಾಡಿನ ಬಗ್ಗೆ ಮಾತನಾಡಿ, ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ್ಗೆ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾ ದಲ್ಲಿ ಖುಷಿಗಾಗಿ ಹಾಡುತ್ತಿದ್ದೆ. ಮೈಕಲ್ ಜಾಕ್ಸನ್ ನನ್ನ ಅಚ್ಚುಮೆಚ್ಚಿನ ಕಲಾವಿದ. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಆ ಒಲವೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಆ ಮ್ಯೂಸಿಕ್ ಟ್ರ್ಯಾಕ್ ಕೇಳಿಸಿಕೊಂಡ ಪೃಥ್ವಿ ಅಂಬರ್ ತುಂಬಾ ಸೊಗಸಾಗಿ ಹಾಡಿದ್ದಾರೆ. ಇನ್ನು ಪೃಥ್ವಿ ಅಂಬರ್ ಹಾಡಿರುವ ಶೈಲಿಗೆ ಇಡೀ ಲೈಫ್ ಈಸ್ ಬ್ಯೂಟಿಫುಲ್ ಚಿತ್ರತಂಡ ಖುಷಿಯಾಗಿದೆ. ಇನ್ನು ಇದೊಂದು ಬಯಸದೇ ಬಂದ ಭಾಗ್ಯ ಎನ್ನುವುದು ಪೃಥ್ವಿ ಮಾತು. ನೊಬಿನ್ ಪೌಲ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದ್ದು, ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದಾರೆ.
ಅರುಣ್ ಕುಮಾರ್ ಎಂ ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನದ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.