ಈ ಶುಕ್ರವಾರ, ಅಂದರೆ ಆಗಸ್ಟ್ 23 ರಂದು ಐದು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ನನ್ನ ಪ್ರಕಾರ, ಉಡುಂಬಾ, ರಾಂಧವ, ವಿಜಯರಥ, ಫ್ಯಾನ್ಸ್ ಕನ್ನಡ ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿವೆ. ಇದರೊಂದಿಗೆ ಆರು ಪರಭಾಷಾ ಚಿತ್ರಗಳು ಕೂಡಾ ಬಿಡುಗಡೆಯಾಗುತ್ತಿವೆ.
ನನ್ನ ಪ್ರಕಾರ
ಬಹು ತಾರಾಗಣದ ‘ನನ್ನ ಪ್ರಕಾರ’ ಮೂವರು ನಾಯಕ ಹಾಗೂ ನಾಯಕಿಯರನ್ನು ಒಳಗೊಂಡ ಸಿನಿಮಾ. ಕಿಶೋರ್, ಅರ್ಜುನ್ ಯೋಗಿ ಹಾಗೂ ನಿರಂಜನ್ ದೇಶಪಾಂಡೆ ನಾಯಕರಾಗಿ ನಟಿಸಿದ್ದರೆ, ಪ್ರಿಯಾಮಣಿ, ಮಯೂರಿ ಹಾಗೂ ವೈಷ್ಣವಿ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್ ಕೂಡಾ ಪಾತ್ರವರ್ಗದಲ್ಲಿದ್ದಾರೆ. ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ವಾನವೊಂದು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದೆ. ಜಿ.ವಿ.ಕೆ ಕಂಬೈನ್ಸ್ ಅಡಿ ಗುರುರಾಜ್. ಎಸ್ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ, ಮನವರ್ಷಿ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ಪಳನಿ ರಾಜ್ ಸಾಹಸ, ಮದನ್-ಹರಿಣಿ, ನಾಗೇಶ್ ನೃತ್ಯ, ವಿನೋದ್ ರಾವ್ ಕಲಾ ನಿರ್ದೇಶನ, ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಿಯಪ್ಪ ಹಾಡುಗಳ ರಚನೆ ಇದೆ.
ವಿಜಯರಥ
ಇದು ಸಹೋದರರ ಜಂಟಿ ಪ್ರಯೋಗ. ವೃಕ್ಷ ಕ್ರಿಯೇಷನ್ಸ್ ಅಡಿಯಲ್ಲಿ ಮಧುಗಿರಿ ನಿವಾಸಿ ರಮೇಶ್ ಎಸ್.ಆರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅವರ ಸಹೋದರ ವಸಂತ್ ಕಲ್ಯಾಣ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಹ ನಿರ್ದೇಶಕ ಆಗಿ ಕೆಲವು ಸಿನಿಮಾಗಳಿಗೆ ದುಡಿದ ಅನುಭವ ಇರುವ ಅಜಯ್ ಸೂರ್ಯ ಈ ಚಿತ್ರದ ಮುಖಾಂತರ ಸ್ವತಂತ್ರ ನಿರ್ದೇಶಕ ಆಗಿದ್ದಾರೆ. ಕುತೂಹಲಕಾರಿ ಚಿತ್ರಕಥೆ ಒಳಗೊಂಡಿರುವ ಈ ಸಿನಿಮಾದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ನಾಯಕಿ ಆಗಿ ನಟಿಸುತ್ತಿದ್ದಾರೆ. ಅರ್ಪಿತ ಗೌಡ ಮತ್ತೊಬ್ಬ ನಾಯಕಿ, ರಾಜೇಶ್ ನಟರಂಗ, ಹನುಮಂತೇಗೌಡ, ನಿಹಾರಿಕ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರೇಮ್ ಕುಮಾರ್ ಸಂಗೀತ ನೀಡಿದ್ದಾರೆ. ಎಸ್.ಎಸ್. ಚಂದ್ರು ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಯೋಗಿ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ, ಭೂಷಣ್ ನೃತ್ಯ ಕುಂಗ್ ಫೂ ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ.
ಉಡುಂಬಾ
ಶ್ರೀ ಚಂದ್ರ ಪ್ರೊಡಕ್ಷನ್ ಅಡಿ ತಯಾರಾಗಿರುವ ‘ಉಡುಂಬಾ’ ಚಿತ್ರವನ್ನು ಶಿವರಾಜ್ ನಿರ್ದೇಶಿಸಿದ್ದಾರೆ. ಇದೊಂದು ಮೀನುಗಾರ ಪಂಗಡದ ಯುವಕನ ಸುತ್ತ ಕಥೆ ಹೆಣೆಯಲಾಗಿದ್ದು, ಕಡಲ ತೀರಗಳಾದ ಉಡುಪಿ, ಗೋಕರ್ಣ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಾಯಕ ಪವನ್ ಸೂರ್ಯ ‘ಗೂಳಿ ಹಟ್ಟಿ’ ಚಿತ್ರದ ನಂತರ ಈ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡಿದ್ದಾರೆ. ಪವನ್ ಸೂರ್ಯ ಅವರ ಉದ್ದುದ್ದ ಸಂಭಾಷಣೆಗಳು ಈಗಾಗಲೇ ಬಹಳ ಜನಪ್ರಿಯವಾಗಿದೆ. ಹೇಮಂತ್ ರಾವ್, ವೆಂಕಟಶಿವ ರೆಡ್ಡಿ, ಮಹೇಶ್ ಕುಮಾರ್ ಮೂವರು ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿರಶ್ರೀ ಪವನ್ಗೆ ನಾಯಕಿಯಾಗಿ ನಟಿಸಿದ್ದಾರೆ. ಇರ್ಫಾನ್ ಖಳನಟನಾದರೆ ಶರತ್ ಲೋಹಿತಾಶ್ವ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿನೀತ್ ರಾಜ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಧನ್ ಕುಮಾರ್ ನೃತ್ಯ ನಿರ್ದೇಶನ, ಉದ್ಭವ್ ಸಂಕಲನ ಇದೆ.
ಫ್ಯಾನ್
ದಿವಂಗತ ಶಂಕರ್ ನಾಗ್ ಅಭಿಮಾನಿಯೊಬ್ಬರ ಕುರಿತಾದ ಸಿನಿಮಾ ‘ಫ್ಯಾನ್’. ಶಂಕರ್ ನಾಗ್ ಹುಟ್ಟಿದ ಊರು ಹೊನ್ನಾವರದಲ್ಲಿ ಶೇ.80 ರಷ್ಟು ಚಿತ್ರೀಕರಣ ಮಾಡಲಾಗಿದೆ. ಎಸ್ಎಲ್ಎನ್ ಸಿನಿಮಾಸ್ ಅಡಿ ಸವಿತಾ ಈಶ್ವರ್, ಶಶಿಕಿರಣ್. ಎಂ ಚಿತ್ರವನ್ನು ನಿರ್ಮಿಸಿದ್ದರೆ ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅಭಿಮಾನಿಯ ಅಭಿಮಾನದ ಕಥೆ ದರ್ಶಿತ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದೆ. ವಿಕ್ರಮ್ ಹಾಗೂ ಚಂದನ ದಂಪತಿ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದರೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವಿ. ಪವನ್ ಕುಮಾರ್ ಛಾಯಾಗ್ರಹಣ, ಗಣಪತಿ ಭಟ್ ಸಂಕಲನ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್ ಗೀತ ಸಾಹಿತ್ಯ, ಸದಾಬಾಳು ನೃತ್ಯ, ಮಾಸ್ ಮಾದ ಸಾಹಸ, ದೇವಿ ಪ್ರಕಾಶ್ ಕಲಾ ನಿರ್ದೇಶನ ಇದೆ. ಅದ್ವಿತಿ ಶೆಟ್ಟಿ, ಸಮೀಕ್ಷ, ಪ್ರಸನ್ನ ಶೆಟ್ಟಿ, ವಿಜಯ ಕಾಶಿ, ರವಿಭಟ್, ಮಂಡ್ಯ ರಮೇಶ್, ನವೀನ್ ಡಿ. ಪಾಡೇಳ್, ರಘು ಪಂದೇಶ್ವರ್, ವಿಟ್ಲ ಮುಂಗೆಶ್, ಸಂಗೀತ ಭಟ್, ವಿಜಯಲಕ್ಷ್ಮಿ ಉಪಾಧ್ಯ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ರಾಂಧವ
ಈ ವಾರ ಬಿಡುಗಡೆ ಆಗುತ್ತಿರುವ ಮತ್ತೊಂದು ಕುತೂಹಲ ಭರಿತ ಚಿತ್ರ 'ರಾಂಧವ'. ಸಾಹಸದ ಜೊತೆಗೆ ಪ್ರೇಮಕಥೆ ಕೂಡಾ ಒಳಗೊಂಡಿರುವ ಚಿತ್ರ ಇದು. ಭುವನ್ ಪೊನ್ನಪ್ಪ ಮುಖ್ಯ ಭೂಮಿಕೆಯಲ್ಲಿ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸುನಿಲ್ ಆಚಾರ್ಯ ಚೊಚ್ಚಲ ಚಿತ್ರ. ಹಿನ್ನೆಲೆ ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಕೃತಿ ಚಿತ್ರಾಲಯ ಬ್ಯಾನರ್ ಅಡಿ ಚಿತ್ರವನ್ನು ಸನತ್ ಕುಮಾರ್ ನಿರ್ಮಿಸಿದ್ದಾರೆ. ಶ್ರೇಯಾಂಶ್, ಯಮುನ ಶ್ರೀನಿಧಿ, ಮಂಜುನಾಥ್ ಹೆಗ್ಡೆ, ಶಶಾಂಕ್ ಶೇಷಗಿರಿ, ಲಕ್ಷ್ಮಿ ಹೆಗ್ಡೆ, ರೇಣು ಕುಮಾರ್, ಪ್ರದೀಪ್, ದಯಾನಂದ, ಕುರಿ ಪ್ರತಾಪ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ರಾಜ್ ಶಿವಶಂಕರ್ ಛಾಯಾಗ್ರಹಣ, ಮಹೇಶ್ ಸಂಕಲನ, ಜನಾರ್ದನ್ ಕಲಾ ನಿರ್ದೇಶನ, ಮುತ್ತುರಾಜ್ ವಸ್ತ್ರ ವಿನ್ಯಾಸ ಮಾಡಿದ್ದಾರೆ.