'ಫಸ್ಟ್ ರ್‍ಯಾಂಕ್ ರಾಜು' 'ಕನ್ನಡ ಮೀಡಿಯಂ ರಾಜು' ಗಳಂತ ಹಾಸ್ಯಮಯ ಚಿತ್ರಗಳಲ್ಲಿ ನಟಿಸಿದ್ದ ನಟ ಗುರುನಂದನ್ ಈಗ ಹೊಸ ಅವತಾರ ತಾಳಿದ್ದಾರೆ. ವಿಶೇಷ ಅಂದರೆ ಜೇಮ್ಸ್ ಬಾಂಡ್ ಅವತಾರ ತಾಳಿದ್ದರೂ ಗುರುನಂದನ್ಗೆ ಮಾತ್ರ ರಾಜು ಅನ್ನೋ ಟೈಟಲ್ ಮಾತ್ರ ಬಿಟ್ಟು ಹೋಗಿಲ್ಲ. ರಾಜು ಟೈಟಲ್ ಸೀರೀಸ್ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದ ಗುರುನಂದನ್ ಈಗ ಅದೇ ಹೆಸರಿನ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಗುರುನಂದನ್ ಹೊಸ ಸಿನಿಮಾ ಕೇವಲ ಕಾಮಿಡಿ ಚಿತ್ರವಲ್ಲ, ಬದಲಿಗೆ ಗನ್ ಹಿಡಿದು ಖಡಕ್ ಲುಕ್ನೊಂದಿಗೆ ರಾಜು ಈಗ ಮತ್ತೆ ಹೊಸ ಅವತಾರದಲ್ಲಿ ಗಾಂಧಿನಗರಕ್ಕೆ ಬಂದಿದ್ದಾನೆ. 'ರಾಜು ಜೇಮ್ಸ್ ಬಾಂಡ್' ಎಂಬ ಪಕ್ಕಾ ಥ್ರಿಲ್ಲರ್ ಚಿತ್ರದಲ್ಲಿ ಗುರುನಂದನ್ ನಾಯಕನಾಗಿ ನಟಿಸಿದ್ದು, ಸದ್ದಿಲ್ಲದೆ ಈ ಚಿತ್ರದ ಚಿತ್ರೀಕರಣ ಕೂಡಾ ಮುಗಿಸಿದೆ. ಚಿತ್ರತಂಡ ಇಂದು ಮಾಧ್ಯಮಗಳ ಮುಂದೆ ಹಾಜರಾಗಿ 'ರಾಜು ಜೇಮ್ಸ್ ಬಾಂಡ್' ನನ್ನು ಪರಿಚಯ ಮಾಡಿಕೊಟ್ಟರು. ಈ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಪಟ್ಟಣದಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಆಸೆಯೊತ್ತ ಯುವಕನ ಲೈಫ್ಗೆ ಹುಡುಗಿಯೊಬ್ಬಳು ಎಂಟ್ರಿ ಕೊಟ್ಟರೆ ಏನೆಲ್ಲಾಆಗುತ್ತದೆ. ಪೆನ್ ಹಿಡಿಯೋ ಕೈಲಿ ಗನ್ ಏಕೆ ಹಿಡಿಯುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.
ಬಳ್ಳಾರಿಯ ಸಂಡೂರು ಹಾಗೂ ಲಂಡನ್ನಲ್ಲಿ ಕೂಡಾ ಶೂಟಿಂಗ್ ಜರುಗಿದೆ. ಇನ್ನು ಈ ಚಿತ್ರದಲ್ಲಿ ಗುರುನಂದನ್ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಬಹಳ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿದ್ದು ಪಾತ್ರಕ್ಕಾಗಿ ಗೆಟಪ್ ಬದಲಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೃದುಲಾ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಸಾಧುಕೋಕಿಲ, ಜೈ ಜಗದೀಶ್, ಆರ್ಮುಗಂ ರವಿಶಂಕರ್,ಅಚ್ಯುತ್ ಕುಮಾರ್, ಚಿಕ್ಕಣ್ಣ, ತಬಲಾನಾಣಿ, ವಿಜಯ್ ಚೆಂಡೂರು ಸೇರಿದಂತೆ ಬಹುದೊಡ್ಡ ತಾರಾಬಳಗವೇ ನಟಿಸಿದೆ. ಚಿತ್ರದಲ್ಲಿ ಮನರಂಜನೆಗೆ ಮೋಸ ಇಲ್ಲ ಎಂಬುದು ಚಿತ್ರತಂಡದ ಮಾತು. ಇನ್ನು ಈ ಚಿತ್ರವನ್ನು ಕರ್ಮ ಬ್ರೋಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಲಂಡನ್ ನಿವಾಸಿಗಳಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮಾಸ್ ಮಾದ ಸ್ಟಂಟ್ ಡೈರೆಕ್ಷನ್ ಮಾಡಿದ್ದು, ಮನೋಹರ್ ಜೋಷಿ ಛಾಯಾಗ್ರಹಣವಿದೆ. ಬೇಸಿಗೆಯಲ್ಲಿ ರಾಜು ಜೇಮ್ಸ್ ಬಾಂಡ್ ನಿಮ್ಮೆಲ್ಲರಿಗೆ ದರ್ಶನ ನೀಡಲಿದ್ದಾನೆ.