ಇಡೀ ವಿಶ್ವವೇ ಕೊರೊನಾದಿಂದ ನೋವು ಅನುಭವಿಸುತ್ತಿದೆ. ಕೊರೊನಾದಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ನೋವಿನ ನಡುವೆ ಎರಡೂವರೆ ತಿಂಗಳ ಅವಧಿಯಲ್ಲಿ ಚಿತ್ರರಂಗದ ಗಣ್ಯರ ಹಠಾತ್ ನಿಧನ ಕೂಡಾ ಎಲ್ಲರಿಗೂ ಬಹಳ ನೋವುಂಟು ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ಕೊರೊನಾ ಲಾಕ್ಡೌನ್ ಸಮಯದಲ್ಲಿ ಬದುಕಿನ ಪಯಣ ಮುಗಿಸಿದ ಮೊದಲ ನಟ ಬುಲೆಟ್ ಪ್ರಕಾಶ್. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಿವರಾಜ್ಕುಮಾರ್, ರವಿಚಂದ್ರನ್, ಪುನೀತ್, ದರ್ಶನ್, ಸುದೀಪ್ ಸೇರಿದಂತೆ ಬಹುತೇಕ ಎಲ್ಲಾ ನಟರೊಂದಿಗೆ ಪ್ರಕಾಶ್ ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಏಪ್ರಿಲ್ 6 ರಂದು ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಿದರು.
ಕನ್ನಡ ಚಿತ್ರರಂಗದಲ್ಲಿ ಭಿಕ್ಷುಕನ ಪಾತ್ರದಿಂದಲೇ ಹೆಚ್ಚು ಖ್ಯಾತರಾಗಿದ್ದ ಮೈಕಲ್ ಮಧು ಬುಲೆಟ್ ಪ್ರಕಾಶ್ ಸಾವನ್ನಪಿದಾಗ ಸಂತಾಪ ಸೂಚಿಸಿದ್ದರು. ಆದರೆ ಬುಲೆಟ್ ಪ್ರಕಾಶ್ ಅಗಲಿದ ಒಂದು ತಿಂಗಳ ನಂತರ ಅಂದರೆ, ಮೇ 13 ರಂದು ಮೈಕಲ್ ಮಧು ಕೂಡಾ ಹೃದಯಾಘಾತದಿಂದ ಸಾವನ್ನಪಿದರು. ಮಧು ಕೂಡಾ ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ನಟಿಸಿದ್ದಾರೆ.
ಮೆಬಿನಾ ಮೈಕಲ್, 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನಿಂದ ಕನ್ನಡಿಗರಿಗೆ ಪರಿಚಯವಾದ ಹುಡುಗಿ. ಮೇ 26 ರಂದು ಕೊಡಗಿಗೆ ತನ್ನ ಅಜ್ಜಿಯನ್ನು ನೋಡಲು ತೆರಳುತ್ತಿರುವಾಗ ಕಾರು ಅಪಘಾತವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟರು. ಮೆಬಿನಾ ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಮೆಟ್ಟಿಲು ಏರುತ್ತಿದ್ದರು. ಅವರು ಚಿತ್ರಗಳಲ್ಲಿ ಕೂಡಾ ನಟಿಸಿದ್ದರು. ತಂದೆ ಸಾವನ್ನಪ್ಪಿದಾಗ ಮನೆಯ ಜವಾಬ್ದಾರಿಯನ್ನು ಮೆಬಿನಾ ತಾವೇ ಹೊತ್ತಿದ್ದರು. ಆದರೆ ಅರಳುವ ಮುನ್ನವೇ ಹೂವು ಬಾಡಿತು ಎಂಬಂತೆ ಬದುಕು ಅರಳುವ ಮುನ್ನವೇ ಮೆಬಿನಾ ಎಲ್ಲರನ್ನೂ ಅಗಲಿದರು.
ಇನ್ನು ಕನ್ನಡ ಚಿತ್ರರಂಗದಲ್ಲಿ ಯಾರೂ ನಂಬಲಾಗದ ಸುದ್ದಿ ಎಂದರೆ ಚಿರಂಜೀವಿ ಸರ್ಜಾ ನಿಧನ. ಜೂನ್ 7 ರಂದು ಮಧ್ಯಾಹ್ನ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ವಿಷಯ ಕೇಳುತ್ತಿದ್ದಂತೆ ಎಲ್ಲರೂ ಆಘಾತಕ್ಕೆ ಒಳಗಾದರು. 2 ವರ್ಷಗಳ ಹಿಂದಷ್ಟೇ ತಾವು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ಅವರನ್ನು ಚಿರು ವರಿಸಿದ್ದರು. ಮೇಘನಾ ಈಗ ಗರ್ಭಿಣಿಯಾಗಿದ್ದು ಮಗುವನ್ನು ನೋಡುವ ಮುನ್ನವೇ ಚಿರು ತಮ್ಮ 34ನೇ ವಯಸ್ಸಿನಲ್ಲಿ ಸಾವನ್ನಪ್ಪಿರುವುದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಉಂಟಾದ ತುಂಬಲಾರದ ನಷ್ಟ.
ಇನ್ನು ಬಾಲಿವುಡ್ ವಿಚಾರಕ್ಕೆ ಬರುವುದಾದರೆ ತಮ್ಮದೇ ವಿಭಿನ್ನ ಅಭಿನಯದ ಮೂಲಕ ಸಾಕಷ್ಟು ಹೆಸರಾಗಿದ್ದ ಇರ್ಫಾನ್ ಖಾನ್ ನಿಧನರಾಗಿದ್ದು ಕೂಡಾ ಬಹಳ ನೋವಿನ ವಿಚಾರ. ಇರ್ಫಾನ್ 1 ವರ್ಷದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಇರ್ಫಾನ್ ನಿಧನರಾಗುವ ಒಂದು ವಾರದ ಮೊದಲು ಅವರ ತಾಯಿ ನಿಧನರಾಗಿದ್ದರು. ಕೊನೆ ಘಳಿಗೆಯಲ್ಲಿ ಅಮ್ಮನನ್ನು ನೋಡಲಾಗದೆ ಇರ್ಫಾನ್ ನೋವಿನಲ್ಲಿದ್ದರು. ಏಪ್ರಿಲ್ 29 ರಂದು ಇರ್ಫಾನ್ ಕೂಡಾ ಆಸ್ಪತ್ರೆಯಲ್ಲಿ ನಿಧನರಾದರು.
ಮತ್ತೊಂದು ನಂಬಲಾಗದ ಸುದ್ದಿ ಎಂದರೆ ಇರ್ಫಾನ್ ನಿಧನರಾದ ಮರುದಿನವೇ ಖ್ಯಾತ ಹಿರಿಯ ನಟ ರಿಷಿ ಕಪೂರ್ ನಿಧನರಾದರು. ಒಮ್ಮೆಲೇ ಬಾಲಿವುಡ್ನ ಎರಡು ತಾರೆಗಳು ಹೀಗೆ ಮರೆಯಾಗಿದ್ದು ಬಿಟೌನ್ ಮಂದಿಗೆ ಅರಗಿಸಿಕೊಳ್ಳಲಾಗದಂತ ನೋವಾಗಿತ್ತು. ಏಪ್ರಿಲ್ 30 ರಂದು ಮುಂಬೈನ ಆಸ್ಪತ್ರೆಯಲ್ಲಿ ರಿಷಿ ಕಪೂರ್ ಇಹಲೋಹ ತ್ಯಜಿಸಿದರು.
ಇರ್ಫಾನ್ ಖಾನ್, ರಿಷಿ ಕಪೂರ್ ನಂತರ ಮೇ 1 ರಂದು ಫಿಲ್ಮ್ ಆ್ಯಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಲ್ಮೀತ್ ಮಕ್ಕರ್ ನಿಧನರಾದರು. ಇವರ ಸಾವಿಗೆ ಕೂಡಾ ಬಾಲಿವುಡ್ ಬಹಳ ದು:ಖ ವ್ಯಕ್ತಪಡಿಸಿತ್ತು.
ತಮ್ಮ ವಿಭಿನ್ನ ಸಂಗೀತದ ಮೂಲಕ ಗಮನ ಸೆಳೆದಿದ್ದ ಸಂಗೀತ ನಿರ್ದೇಶಕ ವಾಜಿದ್ ಖಾನ್ ಜೂನ್ 1 ರಂದು ಕೊನೆಯುಸಿರೆಳೆದರು. ವಾಜಿದ್ ಖಾನ್ಗೆ ಇನ್ನೂ 42 ವರ್ಷ ವಯಸ್ಸಾಗಿತ್ತು.
ಜೂನ್ 04 ರಂದು ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ಬಸು ಚಟರ್ಜಿ ನಿಧನರಾದರು. 90 ವರ್ಷದ ಬಸು ಚಟರ್ಜಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಬಾಲಿವುಡ್ ಹಿರಿಯ ನಿರ್ಮಾಪಕ ಅನಿಲ್ ಸೂರಿ ಅವರಿಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ಜೂನ್ 6 ರಂದು ಸಾವನ್ನಪಿದರು. ಅನಿಲ್ ಸೂರಿ ಅವರಿಗೆ 77 ವರ್ಷ ವಯಸ್ಸಾಗಿತ್ತು.
ಜೂನ್ 13, ಶನಿವಾರ ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ಬಿ. ಕಣ್ಣನ್ ನಿಧನರಾದರು. ಕಣ್ಣನ್ ನಿಧನಕ್ಕೆ ಖುಷ್ಬೂ ಸೇರಿದಂತೆ ಕಾಲಿವುಡ್ ಹಾಗೂ ಮಲಯಾಳಂ ಚಿತ್ರರಂಗ ಬೇಸರ ವ್ಯಕ್ತಪಡಿಸಿದೆ.
ಹಿಂದಿ ಚಿತ್ರರಂಗಕ್ಕೆ ಉಂಟಾದ ಮತ್ತೊಂದು ದೊಡ್ಡ ಆಘಾತ ಎಂದರೆ ನಿನ್ನೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು. ಉದಯೋನ್ಮುಖ ನಟ ಸುಶಾಂತ್ 34ನೇ ವಯಸ್ಸಿಗೆ ಸಾವನ್ನಪ್ಪಿದ್ದು, ಅದೂ ಕೂಡಾ ಡಿಪ್ರೆಷನ್ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದೊಡ್ಡ ಆಘಾತಕಾರಿ ಸುದ್ದಿ. 'ಎಂ.ಎಸ್. ಧೋನಿ ದಿ ಅನ್ಟೋಲ್ಡ್ ಸ್ಟೋರಿ' ಸಿನಿಮಾ ಸುಶಾಂತ್ ಅವರಿಗೆ ಭಾರೀ ಹೆಸರು ನೀಡಿತ್ತು.
ಮಲಯಾಳಂ ನಟಿ, ಗೀತ ರಚನೆಗಾರ್ತಿ ಪದ್ಮಜಾ ರಾಧಾಕೃಷ್ಣನ್ ಇಂದು ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಪದ್ಮಜಾ ರಾಧಾಕೃಷ್ಣನ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಒಂದು ಕಡೆ ಕೊರೊನಾದಿಂದಾಗಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಸಿನಿಮಾರಂಗದ ಘಟಾನುಘಟಿಗಳು ಹೃದಯಾಘಾತ, ಆತ್ಮಹತ್ಯೆ, ಅಪಘಾತದಿಂದ ಸಾವನ್ನಪ್ಪುತ್ತಿರುವುದು ಬೇಸರದ ವಿಚಾರವಾಗಿದೆ.