ಚಂದನವನ ಎಂದೇ ಕರೆಸಿಕೊಳ್ಳುವ ಕನ್ನಡ ಚಿತ್ರರಂಗ ಸದ್ಯ ಹೊಸತನದತ್ತ ಹೊರಳುತ್ತಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಆಗಮನ ಒಂದೆಡೆಯಾದರೆ, ಪ್ರಯೋಗಾತ್ಮಕ ಚಿತ್ರ ನಿರ್ಮಾಣ ಸಿನಿರಂಗವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯುತ್ತಿದೆ. ಇದರ ನಡುವೆಯೇ ಆಲ್ಬಂ ಸಾಂಗ್ಗಳು ಸಖತ್ ಸೌಂಡ್ ಮಾಡ್ತಿವೆ.
ರ‍್ಯಾಪ್ ಸಾಂಗ್ಗಳು ಸದ್ಯದ ಜಮಾನದಲ್ಲಿ ಕೇಳುಗರ ಹೃದಯ ಗೆಲ್ಲುತ್ತಿವೆ. ಚಂದನ್ ಶೆಟ್ಟಿ, ಅಲೋಕ್ರಂತಹ ಸ್ವತಂತ್ರ ಗಾಯಕರಿಂದ ಕನ್ನಡಕ್ಕೂ ಪರಿಚಿತವಾದ ರ‍್ಯಾಪ್ ಹಾಡುಗಳು ಹಲವರಿಗೆ ಸ್ಫೂರ್ತಿ. ಅದೇ ರೀತಿ ಈಗ ಪೃಥ್ವಿರಾಜ್ ಎಂಬ ಯುವಗಾಯಕ ತಯಾರಿಸಿರುವ 'ಫಿದಾ' ಎಂಬ ಆಲ್ಬಮ್ ವಿಡಿಯೋ ಸಾಂಗ್ ಇಂದು ರಿಲೀಸ್ ಆಗಿದೆ.
ಈ ಆಲ್ಬಂ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಅನಿರುದ್ದ್ ಆಗಮಿಸಿ, ಹಾಡನ್ನು ಲಾಂಚ್ ಮಾಡಿದ್ದಾರೆ. ಬಿಡುಗಡೆಯ ಬಳಿಕ ಹೊಸ ಗಾಯಕನಿಗೆ ವಿಷ್ಣುವರ್ಧನ್ ಅಳಿಯ ಶುಭ ಹಾರೈಸಿದ್ದಾರೆ.
ಆಲ್ಬಮ್ ಹಾಡನ್ನು ಪೃಥ್ವಿರಾಜ್ ಸ್ನೇಹಿತರ ಜೊತೆಗೂಡಿ ತಯಾರಿಸಿದ್ದಾರೆ. ವಿಶೇಷವೆಂದರೆ ತುಂಬಾ ಸಮಯದ ನಂತರ ಖ್ಯಾತ ಗೀತಸಾಹಿತಿ ಜಯಂತ್ ಕಾಯ್ಕಿಣಿ ಆಲ್ಬಮ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಒಂದು ಮೆಲೋಡಿ ಟ್ರ್ಯಾಕ್‌ನಲ್ಲಿ ಇರುವ ಈ ಆಲ್ಬಂನ ಪೃಥ್ವಿರಾಜ್ ಹಾಡಿದ್ದಾರೆ. ಜೊತೆಗೆ ಹಾಡಿನಲ್ಲಿ ಅಭಿನಯವನ್ನೂ ಮಾಡಿದ್ದಾರೆ. ಇವರ ಜೋಡಿಯಾಗಿ ಸಾತ್ವಿಕ ಅಯ್ಯಪ್ಪ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು ಐದು ದಿನಗಳು ಶೂಟಿಂಗ್ ಮಾಡಿರುವ ಈ ಹಾಡನ್ನು ಪೃಥ್ವಿರಾಜ್ ಅವರೇ ನಿರ್ಮಾಣ ಮಾಡಿದ್ದಾರೆ.