ವರನಟ ಡಾ. ರಾಜ್ಕುಮಾರ್ ಕುಟುಂಬದ ಹಿರಿಯ ಸೊಸೆ, ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಹುಟ್ಟುಹಬ್ಬವನ್ನು ನಿನ್ನೆ ಸರಳವಾಗಿ ಆಚರಿಸಲಾಯಿತು. ಬೆಂಗಳೂರಿನ ಅವರ ನಿವಾಸದಲ್ಲಿ ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಕೊರೊನಾ ವೈರಸ್ ಭೀತಿ ಕಾರಣ ಕೆಲವೇ ಕೆಲವು ಅಭಿಮಾನಿಗಳು ಮಾತ್ರ ಶಿವರಾಜ್ಕುಮಾರ್ ಅವರ ನಿವಾಸಕ್ಕೆ ತೆರಳಿ ಗೀತಾ ಶಿವರಾಜ್ಕುಮಾರ್ ಅವರಿಗೆ ಹೂಗುಚ್ಛ ಅರ್ಪಿಸಿ ಹುಟ್ಟುಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಡಾ. ಶಿವರಾಜ್ಕುಮಾರ್ ಕೇಕ್ ಕಟ್ ಮಾಡಿ ಪತ್ನಿ ಗೀತಾ ಅವರಿಗೆ ತಿನ್ನಿಸಿದರು. ಅಭಿಮಾನಿಗಳ ಪ್ರೀತಿ ವಿಶ್ವಾಸ ಕಂಡು ಗೀತಾ ಶಿವರಾಜ್ಕುಮಾರ್ ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಸೇನಾ ಸಮಿತಿ, ಗಂಡುಗಲಿ ಡಾ. ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಟಿ. ನಾರಾಯಣ್, ಗಾಂಧಿನಗರ ಬಡಾವಣೆ ಅಧ್ಯಕ್ಷರಾದ ಎಂ. ಮಲ್ಲ ಹಾಗೂ ಇತರರು ಹಾಜರಿದ್ದರು.
