ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಜುಲೈ 12 ರಂದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ 58ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಶಿವರಾಜ್ಕುಮಾರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿ ಮನೆ ಬಳಿ ಯಾರೂ ಬರಬೇಡಿ ಎಂದು ಶಿವಣ್ಣ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.
ಅಭಿಮಾನಿಗಳು ಮಾತ್ರ ತಾವು ಇರುವಲ್ಲೇ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ. ಇನ್ನು ಅಭಿಮಾನಿಗಳು ಶಿವಣ್ಣ ಅವರನ್ನು ಎಷ್ಟು ಗೌರವಿಸುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಚೌಡರಾಜ್ ಎನ್ನುವವರು ಶಿವಣ್ಣ ನಟನೆಯ 125 ಸಿನಿಮಾಗಳನ್ನು ಕೇವಲ ಎರಡು ನಿಮಿಷಗಳಲ್ಲಿ ನಿರರ್ಗಳವಾಗಿ ಹೇಳುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ದೊಡ್ಡಬಳ್ಳಾಪುರದ ಡಿ.ಸಿ. ಚೌಡರಾಜ್ ಎಂಬುವವರಿಗೆ ಶಿವರಾಜ್ಕುಮಾರ್ ಎಂದರೆ ಇನ್ನಿಲ್ಲದ ಅಭಿಮಾನ. ಶಿವಣ್ಣ 'ಆನಂದ್' ಚಿತ್ರದಿಂದ ಹಿಡಿದು 125ನೇ ಸಿನಿಮಾ 'ಭಜರಂಗಿ-2' ಚಿತ್ರಗಳ ಹೆಸರನ್ನು ನೀರು ಕುಡಿದಷ್ಟೇ ಸಲೀಸಾಗಿ ಹೇಳುತ್ತಾರೆ ಚೌಡರಾಜ್. ಚೌಡರಾಜ್ 5ನೇ ತರಗತಿ ಓದುವಾಗಲೇ ಶಿವಣ್ಣನ ಅಭಿಮಾನಿಯಾಗಿದ್ದರು. ದೊಡ್ಡಬಳ್ಳಾಪುರದಲ್ಲಿ ಶಿವಣ್ಣನ 'ಮನ ಮೆಚ್ಚಿದ ಹುಡುಗಿ' ಸಿನಿಮಾ ಬಿಡುಗಡೆಯಾಗಿತ್ತು, ಶಾಲೆಗೆ ಚಕ್ಕರ್ ಹಾಕಿದ ಚೌಡರಾಜ್ ತಮ್ಮ ಸ್ನೇಹಿತರ ಜೊತೆ ಸಿನಿಮಾ ನೋಡಲು ಹೋಗಿ ಶಿಕ್ಷಕರಿಂದ ಬೈಗುಳಕ್ಕೆ ಒಳಗಾಗಿದ್ದರು.
ಶಿವಣ್ಣನಂತೆ ಹೇರ್ಸ್ಟೈಲ್ ಮಾಡಿಕೊಳ್ಳುವುದು, ದಿನಪತ್ರಿಕೆಗಳಲ್ಲಿ ಬರುವ ಶಿವಣ್ಣನ ಪೋಟೋಗಳನ್ನು ಕತ್ತರಿಸಿ ಗೋಡೆಗೆ ಅಂಟಿಸುವುದು ಇವರ ಹವ್ಯಾಸವಾಗಿತ್ತು. ಘಾಟಿ ಸುಬ್ರಮಣ್ಯದಲ್ಲಿ 'ದೊರೆ' ಚಿತ್ರದ ಶೂಟಿಂಗ್ ನಡೆಯುವಾಗ ತಮ್ಮ ಆರಾಧ್ಯ ದೈವ ಶಿವಣ್ಣನನ್ನು ನೋಡಲು ಸ್ನೇಹಿತರ ಜೊತೆ ಹೋಗಿ ಒಂದೇ ಬಾರಿ ಅವರ 26 ಸಿನಿಮಾಗಳನ್ನು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಂದಿನಿಂದ ಶಿವಣ್ಣ ಅಭಿನಯದ ಎಲ್ಲಾ ಸಿನಿಮಾಗಳ ಹೆಸರನ್ನು ಕಂಠಪಾಠ ಮಾಡಿದರು. ಪ್ರತಿವರ್ಷ ಶಿವಣ್ಣನ ಹುಟ್ಟುಹಬ್ಬದಂದು ಶಿವಣ್ಣನ ಮನೆ ಬಳಿ ಹೋಗಿ ಹುಟ್ಟುಹಬ್ಬದ ಶುಭ ಕೋರುತ್ತಿದ್ದರು. ಇವರನ್ನು ನೋಡುತ್ತಿದ್ದಂತೆ ಶಿವಣ್ಣ ಕೂಡಾ ಓ ದೊಡ್ಡಬಳ್ಳಾಪುರ ಎಂದು ಪ್ರೀತಿಯಿಂದ ಕರೆಯುತ್ತಿದ್ದರಂತೆ. ಆದರೆ ಈ ಬಾರಿ ಶಿವಣ್ಣ ಬರ್ತಡೇ ಆಚರಿಸಿಕೊಳ್ಳುತ್ತಿಲ್ಲವಾದ್ದರಿಂದ ಅವರ ಮನೆ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಚೌಡರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿರುವ ಚೌಡರಾಜ್, ಸಮಾಜಮುಖಿ ಕಾರ್ಯಗಳಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಜೊತೆಗೆ ಶಿವಣ್ಣನ ಹುಟ್ಟುಹಬ್ಬದಂದು ರಕ್ತದಾನ ಶಿಬಿರ, ಗಿಡಗಳನ್ನು ನೆಡುವುದು ಹಾಗೂ ಬಡವರಿಗೆ ಊಟ ಹಾಕುವ ಕೆಲಸ ಮಾಡುತ್ತಾ ಬಂದಿದ್ದಾರೆ ಚೌಡರಾಜ್.
ವಿಶೇಷ ಎಂದರೆ ಒಂದು ವೇಳೆ ಶಿವಣ್ಣನಿಗೆ ತಮ್ಮ ಸಿನಿಮಾಗಳ ಬಗ್ಗೆ ಏನಾದರೂ ಗೊಂದಲ ಉಂಟಾದರೆ ಕೂಡಲೇ ಚೌಡರಾಜ್ ಅವರಿಗೆ ಕರೆ ಮಾಡಿ ಅನುಮಾನ ಬಗೆಹರಿಸಿಕೊಳ್ಳುತ್ತಾರೆ ಎಂದು ಚೌಡರಾಜ್ ಖುಷಿಯಿಂದ ಹೇಳಿಕೊಂಡಿದ್ದಾರೆ.