ಶಂಕರ್ನಾಗ್ ಅವರು ಇಂದು ನಮ್ಮ ನಡುವೆ ಇಲ್ಲವಾದರೂ ಅವರಿಗೆ ಇಂದಿಗೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಸಾಕಷ್ಟು ಆಟೋಗಳ ಹಿಂದೆ ಅಭಿಮಾನಿಗಳು ಶಂಕರ್ನಾಗ್ ಫೋಟೋ ಹಾಕಿಕೊಂಡಿರುವುದನ್ನು ನೀವು ಕಾಣಬಹುದು.
ಇದೀಗ ಶಂಕರ್ನಾಗ್ ಅಭಿಮಾನಿ ಕಥೆ ಹೊಂದಿರುವ 'ಫ್ಯಾನ್' ಎಂಬ ಚಿತ್ರ ಸ್ಯಾಂಡಲ್ವುಡ್ನಲ್ಲಿ ರೆಡಿಯಾಗುತ್ತಿದೆ. ಚಿತ್ರದಲ್ಲಿ ಹೊಸ ನಟ ಆರ್ಯನ್, ಶಂಕ್ರಣ್ಣನ ಅಭಿಮಾನಿಯಾಗಿ ನಟಿಸಿದ್ದರೆ ಅದ್ವಿತಿ ಶೆಟ್ಟಿ ಹಾಗೂ ಸಮೀಕ್ಷಾ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದರ್ಶಿತ್ ಭಟ್ ಈ 'ಫ್ಯಾನ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶಂಕರ್ನಾಗ್ ಹುಟ್ಟೂರಾದ ಹೊನ್ನಾವರ ಹಾಗೂ ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಶೂಟಿಂಗ್ ಮುಗಿದಿದ್ದು, ನಿನ್ನೆ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಚಿನ್ನೇಗೌಡ್ರು, ನಟ ರಕ್ಷಿತ್ ಶೆಟ್ಟಿ, ವಿಜಯನಗರದ ಶಾಸಕ ಎಂ.ಕೃಷ್ಣಪ್ಪ ಹಾಗೂ ಇನ್ನಿತರರು ಆಗಮಿಸಿದ್ದರು.
ಚಿತ್ರದಲ್ಲಿ 4 ಹಾಡುಗಳಿದ್ದು, ವಿಕ್ರಂ ಹಾಗೂ ಚಂದನ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ರಚಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ರೀ ರೆಕಾರ್ಡಿಂಗ್ ಚಿತ್ರಕ್ಕಿದ್ದು, ಈಗಾಗಲೇ ಚಿತ್ರದ ಎಲ್ಲಾ ಕೆಲಸ ಬಹುತೇಕ ಮುಗಿದಿದೆ. ಎಸ್ಎಲ್ಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸವಿತಾ ಈಶ್ವರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾವನ್ನು ಸೆನ್ಸಾರ್ ಸರ್ಟಿಫಿಕೇಟ್ ಪಡೆದ ಕೂಡಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.