'ಸಂಕಷ್ಟಕ್ಕರ ಗಣಪತಿ' ಸಿನಿಮಾದ ಬಳಿಕ ನಟ ಲಿಖಿತ್ ಶೆಟ್ಟಿ ಅಭಿನಯದ ಫ್ಯಾಮಿಲಿ ಪ್ಯಾಕ್ ಶೀರ್ಷಿಕೆಯಿಂದಲೇ ಗಮನ ಸೆಳೆದ ಚಿತ್ರಗಳಲ್ಲಿ ಒಂದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದೆ, ನೇರವಾಗಿ ಅಮೆಜಾನ್ ಪ್ರೈಮ್ನಲ್ಲಿ ಫೆಬ್ರವರಿ 17ರಂದು ಚಿತ್ರ ಬಿಡುಗಡೆ ಆಗಿತ್ತು.
ಪಿಆರ್ಕೆ ಬ್ಯಾನರ್ ಅಡಿ ಓಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರ ಸಕ್ಸಸ್ ಕಂಡಿದ್ದು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಈ ಖುಷಿಯನ್ನು ನಟ ಲಿಖಿತ್ ಶೆಟ್ಟಿ, ಹಿರಿಯ ನಟ ಸಿಹಿಕಹಿ ಚಂದ್ರು, ನಟಿ ಶರ್ಮಿತಾ ಗೌಡ ಹಾಗೂ ನಿರ್ದೇಶಕ ಅರ್ಜುನ್ ಕುಮಾರ್, ಫ್ಯಾಮಿಲಿ ಪ್ಯಾಕ್ ಸಿನಿಮಾ ಕೆಲ ಇಂಟ್ರಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡರು.
ಇದೊಂದು ಕಾಲ್ಪನಿಕ ಕಥೆಯುಳ್ಳ ಸಿನಿಮಾ. ಈ ಚಿತ್ರವನ್ನು ಫ್ಯಾಮಿಲಿ ಪ್ರೇಕ್ಷಕರು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ಪುನೀತ್ ಸಾರ್ಗೆ ಈ ಕಥೆ ಹೇಳಿದಾಗ ನಮ್ಮ ಬ್ಯಾನರ್ನಲ್ಲಿ ಮಾಡಿ ಅಂತಾ ಬೆನ್ನು ತಟ್ಟಿದರು. ಅಂದುಕೊಂಡಂತೆ ಸಿನಿಮಾ ಸಕ್ಸಸ್ ಕಂಡಿದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇದೆ ಅಂತಾರೆ ನಿರ್ದೇಶಕ ಅರ್ಜುನ್ ಕುಮಾರ್.
ಹಿರಿಯ ನಟ ಸಿಹಿಕಹಿ ಚಂದ್ರು ಮಾತನಾಡಿ, ಫ್ಯಾಮಿಲಿ ಸಮೇತ ಯಾವುದೇ ಮುಜುಗರ ಇಲ್ಲದೆ ನೋಡುವ ಚಿತ್ರವಿದು. ಚಿತ್ರದಲ್ಲಿ ನಾನು ಅಪ್ಪ ಹಾಗೂ ತಾತನ ಪಾತ್ರ ಮಾಡಿರುವೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. ತುಂಬಾ ಜನ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಮ್ಮ ಅನುಭವ ಹಂಚುಕೊಂಡರು. ಮಗಳ ಪಾತ್ರಧರಿ ಶರ್ಮಿತಾ ಗೌಡ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ನಟ ಲಿಖಿತ ಶೆಟ್ಟಿ, ನಮ್ಮ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಆಗೋದಿಕ್ಕೆ ಕಾರಣವೇ ಪುನೀತ್ ಸಾರ್. ಅವ್ರ ಸಪೋರ್ಟ್ ಹಾಗೂ ಆಶೀರ್ವಾದ ಇರುವುದರಿಂದ ಈ ಸಿನಿಮಾ ಸಕ್ಸಸ್ ಆಗಿದೆ. ವ್ಯಾಪಾರದಲ್ಲೂ ಕೂಡ ಉತ್ತಮ ಪ್ಯಾಕೇಜ್ ತಂದು ಕೊಟ್ಟಿದೆ ಎಂದರು. ಚಿತ್ರದಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಮಾಸ್ತಿ ಫ್ಯಾಮಿಲಿ ಪ್ಯಾಕ್ಗೆ ಸಂಭಾಷಣೆ ಬರೆದಿದ್ದಾರೆ. ಪಿಆರ್ಕೆ ಬ್ಯಾನರ್ನಲ್ಲಿ ಅಶ್ವಿನಿ ಪುನೀತ್ ನಿರ್ಮಾಣ ಮಾಡಿದ್ದಾರೆ.