ಕನ್ನಡ ಕಿರುತೆರೆಯ ಹಾಡಿನ ಶೋಗಳಲ್ಲೇ ಅಪ್ರತಿಮ, ಕಾರ್ಯಕ್ರಮ ಎನಿಸಿದ ಎದೆ ತುಂಬಿ ಹಾಡುವೆನು ಮತ್ತೆ ಶುರುವಾಗಲಿದೆ. ಈ ಜನಪ್ರಿಯ ಕಾರ್ಯಕ್ರಮ ಒಂಬತ್ತು ಸುದೀರ್ಘ ವರ್ಷಗಳ ವಿರಾಮದ ಬಳಿಕ ಇದೀಗ ಮತ್ತೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದೆ.
ಎದೆ ತುಂಬಿ ಹಾಡುವೆನು ಎಂದಾಕ್ಷಣ ಮೊದಲಿಗೆ ನೆನಪಾಗೋದು ಹಿರಿಯ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ. ಆದರೆ ಅವರೀಗ ಇಲ್ಲ. ಹೀಗಾಗಿ ಕನ್ನಡ ಕಲರ್ಸ್ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಮತ್ತು ಎಸ್ಪಿಬಿ ಅವರ ಮಗ ಎಸ್ ಪಿ ಚರಣ್ ಹಾಗೂ ತೀರ್ಪುಗಾರರಾಗಿ ಸಂಗೀತ ನಿರ್ದೇಶಕರಾದ ವಿ ಹರಿಕೃಷ್ಣ, ರಘು ದೀಕ್ಷಿತ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವಿಜೇತರಿಗೆ 10 ಲಕ್ಷ ಬಹುಮಾನ: ಮೊದಲಿಗೆ ಮಾತನಾಡಿದ ಕನ್ನಡ ಕಲರ್ಸ್ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್, ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೆ ಇಲ್ಲಿ ಹಾಡೋದಿಕ್ಕೆ ಅವಕಾಶ ಇದೆ. ಹಿಂದಿನ ಎದೆ ತುಂಬಿ ಹಾಡುವೆನು ಸಂಚಿಕೆಗಳಲ್ಲಿ ಎಸ್ಪಿಬಿ ಎದುರು ಹಾಡಿದ 60 ಹಳೆಯ ಗಾಯಕರು ಜ್ಯೂರಿ ರೂಪದಲ್ಲಿ ಆಡಿಷನ್ನಿನ ಭಾಗವಾಗಿರುವುದು ಮತ್ತೊಂದು ವಿಶೇಷ. ಮೆಗಾ ಆಡಿಷನ್ನಲ್ಲಿ 30 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಅದರಲ್ಲಿ ಹದಿನಾರು ಅತ್ಯುತ್ತಮ ಗಾಯಕರು ಶೋಗೆ ಆಯ್ಕೆಯಾಗಲಿದ್ದಾರೆ. 16 ವಾರಗಳ ಕಾಲ ಎದೆ ತುಂಬಿ ಹಾಡುವೆನು ಶೋ ನಡೆಯಲಿದ್ದು, ಕೊನೆಗೆ ವಿಜೇತರಿಗೆ 10 ಲಕ್ಷ ರೂ. ಬಹುಮಾನ ಕೂಡ ಇರುತ್ತೆ ಎಂದಿದ್ದಾರೆ.
ಈ ಸೀಸನ್ನಿನ ತೀರ್ಪುಗಾರರಾಗಿ ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಜನಪ್ರಿಯ ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ಖ್ಯಾತ ಗಾಯಕ ರಘು ದೀಕ್ಷಿತ್ ಇರಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರುವ, ಎಸ್ಪಿಬಿ ಮಗ ಎಸ್ ಪಿ ಚರಣ್ ಕಾರ್ಯಕ್ರಮದ ಭಾಗವಾಗಿರುವುದು ಮತ್ತೊಂದು ವಿಶೇಷ. ತಂದೆಯ ಜೊತೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡುವ ಅವಕಾಶ ಸಿಗಲಿಲ್ಲ. ಈಗ ತಂದೆ ನಡೆಸಿಕೊಟ್ಟ, ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರೋದು ಸಂತೋಷ ಆಗುತ್ತಿದೆ ಎಂದಿದ್ದಾರೆ.
ಎಸ್ಪಿಬಿ ಮೈಕ್ ಬಳಕೆ: ಕಾರ್ಯಕ್ರಮದ ಆರಂಭಿಕ ಸಂಚಿಕೆಯಲ್ಲಿ ಎಸ್ಪಿ ಬಾಲಸುಬ್ರಮಣ್ಯಂ ಅವರ ಪ್ರತಿಮೆಯೊಂದನ್ನು ಅನಾವರಣಗೊಳಿಸಲು ಸಿದ್ಧತೆಗಳಾಗಿವೆ. ಎಸ್ಪಿಬಿ ಹಾಡಲು ಉಪಯೋಗಿಸಿದ ಮೈಕ್ ಅನ್ನು ಸೆಟ್ಟಿನಲ್ಲಿ ಸ್ಫೂರ್ತಿಯಂತೆ ಇರಿಸಲಾಗುವುದು' ಎಂದು ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಕಲರ್ಸ್ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಪ್ರಕಾಶ್ ತಿಳಿಸಿದ್ದಾರೆ.
ಆಗಸ್ಟ್ 14ನೇ ತಾರೀಖಿನಿಂದ ರಾತ್ರಿ 9 ಗಂಟೆಗೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಆರಂಭವಾಗಲಿದೆ. ಕನ್ನಡನಾಡಿನ ಮೂಲೆ, ಮೂಲೆಯಲ್ಲಿ ಪುಟ್ಟ ಪುಟ್ಟ ಎಸ್ಪಿಬಿಗಳನ್ನು ಬೆಳಕಿಗೆ ತರುವ ವೇದಿಕೆ ಇದಾಗಲಿದೆ.