ಕೊರೊನಾ ಎಫೆಕ್ಟ್ನಿಂದ ಕಳೆದ 5 ತಿಂಗಳಿಂದ ಕನ್ನಡ ಚಿತ್ರರಂಗದಲ್ಲಿ, ಸಿನಿಮಾ ಚಿತ್ರೀಕರಣ, ಸಿನಿಮಾಗಳು ಬಿಡುಗಡೆ ಇಲ್ಲದೆ ಇಡೀ ಚಿತ್ರರಂಗದ ಸ್ತಬ್ಧ ಆಗಿದೆ. ಇದರಿಂದ ಸಿನಿಮಾ ಕಾರ್ಮಿಕರು, ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಬಹಳ ತೊಂದರೆ ಆಗಿದೆ.
ಇದಕ್ಕೆ ಸಂಬಂಧಿಸಿದಂತೆ 'ಸಲಗ' ಸಿನಿಮಾ ನಿರ್ದೇಶಕ, ನಟ ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹಾಗೂ ಇಡೀ ಸಲಗ ಚಿತ್ರತಂಡ ಶ್ರೀ ಬಂಡೆ ಮಹಾಕಾಳಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರಾವಣ ಮಾಸದ ಈ ಶುಭ ಸಂದರ್ಭದಲ್ಲಿ 'ಸಲಗ' ಚಿತ್ರತಂಡ ದೇವಸ್ಥಾನಕ್ಕೆ ಭೇಟಿ ನೀಡಿ, ಈ ಕೊರೊನಾ ಹಾವಳಿ ಕಡಿಮೆ ಆಗಿ ಎಂದಿನಂತೆ ಕನ್ನಡ ಚಿತ್ರರಂಗದ ಕೆಲಸಗಳು ಆರಂಭವಾಗಲಿ ಎಂದು ಪ್ರಾರ್ಥಿಸಿದ್ದಾರೆ. ಸಿನಿಮಾ ಮುಹೂರ್ತವನ್ನು ಕೂಡಾ ವಿಜಯ್ ಇದೇ ದೇವಸ್ಥಾನದಲ್ಲಿ ನೆರವೇರಿಸಿದ್ದರು.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ 'ಸಲಗ' ಚಿತ್ರತಂಡ ಸೆನ್ಸಾರ್ ಅನುಮತಿಗಾಗಿ ಕಾಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಪೋಸ್ಟರ್ ಭಾರೀ ಸದ್ದು ಮಾಡುತ್ತಿದ್ದು ಸಿನಿಮಾ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಚಿತ್ರಮಂದಿರಗಳು ತೆರೆಯುತ್ತಿದ್ದಂತೆ ಬಿಡುಗಡೆ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ಸಿನಿಮಾ 'ಸಲಗ'. ಈ ಚಿತ್ರದ ಮೂಲಕ ವಿಜಯ್ ನಿರ್ದೇಶಕನ ಸ್ಥಾನ ಕೂಡಾ ಅಲಂಕರಿದ್ದಾರೆ. ಈ ಬ್ಲ್ಯಾಕ್ ಕೋಬ್ರಾಗೆ ಚಿತ್ರದಲ್ಲಿ ಸಂಜನಾ ಆನಂದ್ ಜೋಡಿಯಾಗಿದ್ದಾರೆ. ಡಾಲಿ ಧನಂಜಯ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಮಾಸ್ತಿ ಮಂಜು ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅದ್ದೂರಿ ನಿರ್ಮಾಣ ಮಾಡಿದ್ದಾರೆ.