ಬೇರೆ ಭಾಷೆಯ ಸಿನಿಮಾಗಳು ಕನ್ನಡ ಭಾಷೆಗೆ ಡಬ್ಬಿಂಗ್ ಆಗುವುದು ಹಳೆಯ ವಿಚಾರ. ಪರ ಭಾಷೆಯಿಂದ ಕನ್ನಡಕ್ಕೆ ಡಬ್ ಆದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು ಮಾತ್ರವಲ್ಲದೇ ಕಿರುತೆರೆಯಲ್ಲೂ ಕೂಡಾ ಪ್ರಸಾರ ಕಂಡಿತ್ತು. ಡಬ್ಬಿಂಗ್ ಎಂಬ ಮಾಯೆ ಕೇವಲ ಸಿನಿಮಾಕ್ಕೆ ಮಾತ್ರವಲ್ಲ, ಸೀರಿಯಲ್, ವೆಬ್ ಸೀರಿಸ್ ಲೋಕಕ್ಕೆ ಕಾಲಿರಿಸಿದೆ.
ಹಿಂದಿಯ ಪೌರಾಣಿಕ ಧಾರಾವಾಹಿಗಳ ಸಾಲಿನಲ್ಲಿ ಮೊದಲ ಸ್ಥಾನ ಮಹಾಭಾರತ ಮತ್ತು ರಾಮಾಯಣಕ್ಕೆ ಇದೆ . ಲಾಕ್ ಡೌನ್ ಸಮಯದಲ್ಲಿ ಈ ಹಳೆಯ ಧಾರಾವಾಹಿ ಮತ್ತೆ ಮರುಪ್ರಸಾರ ಕಾಣುತ್ತಿವೆ. ಧಾರಾವಾಹಿಯ ಜೊತೆಗೆ ಹಳೆಯ ನೆನಪುಗಳು ಕೂಡಾ ವೀಕ್ಷಕರ ಮುಂದೆ ಮರುಕಳಿಸುತ್ತಿದೆ.
ಅಂದ ಹಾಗೇ ಹಿಂದಿಯಲ್ಲಿ ಪ್ರಸಾರ ಕಾಣುತ್ತಿರುವ ಮಹಾಭಾರತ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ. ಮಾತ್ರವಲ್ಲ ಇದೇ ಎಪ್ರಿಲ್ 16 ರಿಂದ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದರಿಂದ ನಿಮ್ಮ ನೆಚ್ಚಿನ ಮಹಾಭಾರತ ಧಾರಾವಾಹಿಯನ್ನು ಕನ್ನಡ ಭಾಷೆಯಲ್ಲಿ ನೋಡಿ ಕಣ್ತುಂಬಿಸಿಕೊಳ್ಳುವ ಸದವಕಾಶ ಪ್ರೇಕ್ಷಕರಿಗೆ ಬಂದೊದಗಿದೆ.
![Dubing hindi web series for Kannada](https://etvbharatimages.akamaized.net/etvbharat/prod-images/kn-bng-01-webseries-dubbing-photo-ka10018_05042020090452_0504f_1586057692_70.jpg)
ಇದರ ಜೊತೆಗೆ ಹಿಂದಿಯ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿದ್ದ ನಝರ್ ಎನ್ನುವ ಧಾರಾವಾಹಿಯು ಕೂಡಾ ಕನ್ನಡ ಭಾಷೆಗೆ ಡಬ್ ಆಗಿದ್ದು ದೃಷ್ಟಿ ಎಂಬ ಹೆಸರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ಲಾಕ್ ಡೌನ್ ಸಮಯದಲ್ಲಿ ಕಿರುತೆರೆ ವೀಕ್ಷಕರಿಗೆ ಮಜಾ ದೊರೆಯುವುದಂತೂ ನಿಜ.