ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ನಲ್ಲಿ ಮೂಡಿ ಬರುವ ಚಿತ್ರಕ್ಕೆ ಗಂಧದ ಗುಡಿ ಎಂದು ಹೆಸರಿಡುತ್ತಾರೆ ಎಂಬ ಗಾಳಿ ಸುದ್ದಿ ಹರಡಿದೆ. ಆದರೆ, ಡಾ.ರಾಜ್ ಅಭಿಮಾನಿಗಳು ಚಿತ್ರಕ್ಕೆ ಹೆಸರಿಡದಂತೆ ನಿರ್ದೇಶಕರಿಗೆ ಆಗ್ರಹಿಸಿದ್ದಾರೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ದರ್ಶನ್ ಜೊತೆ ಸೇರಿ 'ರಾಜ ವೀರ ಮದಕರಿ ನಾಯಕ' ಸಿನಿಮಾ ಮಾಡುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಆದರೆ, ಆ ಚಿತ್ರ ಇನ್ನೂ ಸೆಟ್ಟೇರಿಲ್ಲ. ಅದಕ್ಕೂ ಮೊದಲೇ ಇದೇ ಕಾಂಬಿನೇಷನ್ನಲ್ಲಿ ಮತ್ತೊಂದು ಚಿತ್ರ ಮೂಡಿ ಬರಲಿದೆ. ಆ ಚಿತ್ರದಲ್ಲಿ ಡಿ ಬಾಸ್ ಅರಣ್ಯಾಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿತ್ತು.
ಅಂತಾರಾಷ್ಟ್ರೀಯ ಕಥಾಹಂದರವಿರುವ ಚಿತ್ರವನ್ನು ಲಂಡನ್, ಆಫ್ರಿಕಾ ಹಾಗೂ ಹಾಂಕಾಂಗ್ ಫಾರೆಸ್ಟ್ಗಳಲ್ಲಿ ಚಿತ್ರೀಕರಣ ಮಾಡಲು ಆಲೋಚನೆ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ದಚ್ಚು ಫ್ಯಾನ್ಸ್ ಥ್ರಿಲ್ ಆಗಿದ್ದರು. ಅಲ್ಲದೆ ಈ ಚಿತ್ರ ಕಾಡಿನ ಬಗ್ಗೆ ಕುರಿತಾದ ಚಿತ್ರವಾದ್ದರಿಂದ ಸಿನಿಮಾಕ್ಕೆ ಅಣ್ಣಾವ್ರು ಅಭಿನಯದ "ಗಂಧದ ಗುಡಿ" ಟೈಟಲ್‌ನ ಮರುಬಳಕೆ ಮಾಡಲಾಗುತ್ತದೆ ಎಂಬ ವಿಷಯ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿತ್ತು.
ಈ ಕುರಿತಂತೆ ರಾಜ್ ಅಭಿಮಾನಿಗಳು ಚಿತ್ರಕ್ಕೆ ಗಂಧದ ಗುಡಿ ಟೈಟಲ್ ಬಳಸಬಾರದು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಆಗ್ರಹಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗುತ್ತಿದೆ.