ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಹೀರೋಗಳು ಲಾಕ್‍ಡೌನ್ ನಂತರ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಕೆಲವರು ಲಾಕ್‍ಡೌನ್‍ಗೂ ಮುಂಚೆ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಿದರೆ, ಇನ್ನೂ ಕೆಲವರು ಆ ನಂತರ ಹೊಸ ಚಿತ್ರಗಳನ್ನು ಒಪ್ಪಿಕೊಂಡು ಆ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಲಾಕ್‍ಡೌನ್ ಮುಗಿದು ಇಷ್ಟು ತಿಂಗಳಾದರೂ ದರ್ಶನ್ ಮಾತ್ರ ಹಳೆಯ ಚಿತ್ರಗಳನ್ನೂ ಮುಂದುವರೆಸುತ್ತಿಲ್ಲ, ಹೊಸ ಚಿತ್ರಗಳನ್ನೂ ಘೋಷಿಸದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಲಾಕ್‍ಡೌನ್‍ಗೂ ಮುನ್ನ ದರ್ಶನ್, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರಾಜ ವೀರಮದಕರಿ ನಾಯಕ' ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಚಿತ್ರಕ್ಕಾಗಿ ಕೆಲವು ದಿನಗಳ ಕಾಲ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದರು. ಲಾಕ್‍ಡೌನ್ ನಂತರ ಈ ಚಿತ್ರದ ಚಿತ್ರೀಕರಣ ಮುಂದುವರೆಯಬೇಕಿತ್ತು. ಮೊದಲಿಗೆ ಕಳೆದ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭ ಎಂದು ಹೇಳಲಾಯಿತು. ಆ ನಂತರ ಜನವರಿ ಎಂದಾಯಿತು. ಇದೀಗ ಫೆಬ್ರವರಿ ಬಂದರೂ ಚಿತ್ರೀಕರಣ ಪ್ರಾರಂಭವಾಗುತ್ತಲೇ ಇಲ್ಲ. ಚಿತ್ರತಂಡದವರು ಈ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಸದ್ಯದಲ್ಲೇ ಮತ್ತೆ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದರೂ ಮತ್ತೊಂದು ಮೂಲಗಳ ಪ್ರಕಾರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಈ ಸಿನಿಮಾವನ್ನು ಮುಂದುವರೆಸುವುದೋ ಬೇಡವೋ ಎಂದು ಯೋಚಿಸುತ್ತಿದ್ದಾರಂತೆ.
ಇದನ್ನೂ ಓದಿ: 7 ರಾಜ್ಯಗಳಲ್ಲಿ 'ಚಾರ್ಲಿ' ಚಿತ್ರೀಕರಣ; ಆಗಸ್ಟ್ನಲ್ಲಿ ರಿಲೀಸ್ ಎಂದ್ರು ನಿರ್ದೇಶಕ ಕಿರಣ್‍ರಾಜ್
ರಾಕ್‍ಲೈನ್ ವೆಂಕಟೇಶ್ ಹಾಗೆ ಯೋಚಿಸುತ್ತಿರುವುದಕ್ಕೂ ಕಾರಣವಿದೆಯಂತೆ. ಈ ಸಿನಿಮಾಗೆ ಏನಿಲ್ಲವೆಂದರೂ 40 ಕೋಟಿಯಷ್ಟು ಬಜೆಟ್ ಆಗುತ್ತಂತೆ. ಇಂತಹ ಸಂದರ್ಭದಲ್ಲಿ ಅಷ್ಟೊಂದು ಹಣ ಹೂಡಿದರೆ ಹಾಕಿದ ಹಣವನ್ನು ಮರಳಿ ಪಡೆಯಲು ಸಾಧ್ಯಾನಾ..? ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆಯಂತೆ. ಹೇಗಿದ್ದರೂ ದರ್ಶನ್ ಕಾಲ್ಶೀಟ್ ಇದೆ. ಕಡಿಮೆ ಬಜೆಟ್ನಲ್ಲಿ ಯಾವುದಾದರೂ ಖ್ಯಾತ ಸಿನಿಮಾವನ್ನು ರೀಮೇಕ್ ಮಾಡಿದರೆ ಹೇಗೆ ಎಂಬ ಯೋಚನೆ ರಾಕ್ಲೈನ್ಗೆ ಬಂದಿದೆ ಎನ್ನಲಾಗಿದೆ. ಈ ವಿಚಾರಕ್ಕೆ ದರ್ಶನ್ ಏನು ಹೇಳಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಒಂದು ವೇಳೆ ಹೌದು ಎಂದಾದಲ್ಲಿ ರಾಜ ವೀರಮದಕರಿ ನಾಯಕ ನಿಂತು ರಾಕ್‍ಲೈನ್ ಹಾಗೂ ದರ್ಶನ್ ಕಾಂಬಿನೇಶನ್ನಲ್ಲಿ ಮತ್ತೊಂದು ಹೊಸ ಚಿತ್ರ ಆರಂಭವಾದರೆ ಆಶ್ಚರ್ಯವೇನಿಲ್ಲ.