ನಿರ್ಮಾಪಕ ಕಂ ನಿರ್ದೇಶಕ ಗುರು ದೇಶಪಾಂಡೆ ಹೊಸ ಚಿತ್ರವೊಂದನ್ನು ಸದ್ದಿಲ್ಲದೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಅಜಯ್ ರಾವ್ ಜೊತೆ ಚಿತ್ರವೊಂದನ್ನು ನಿರ್ಮಿಸುವುದಾಗಿ ಲಾಕ್‍ಡೌನ್‍ಗೂ ಮುನ್ನ ಅವರು ಹೇಳಿಕೊಂಡಿದ್ದರು. ಆ ಚಿತ್ರವನ್ನು ಪಕ್ಕಕ್ಕಿಟ್ಟು, ಈಗ 'ಪೆಂಟಗನ್' ಎಂಬ ಚಿತ್ರವನ್ನು ಶುರುಮಾಡಿದ್ದಾರೆ ಎನ್ನಲಾಗಿದೆ.
ಐವರು ನಿರ್ದೇಶಕರು ಸೇರಿ ಈ ಚಿತ್ರ ಮಾಡುತ್ತಿರುವುದು ಇದರ ವಿಶೇಷ. ಈ ಐವರು ನಿರ್ದೇಶಕರು ಬೇರೆ ಬೇರೆ ಕಥೆಗಳನ್ನು ರೆಡಿ ಮಾಡಿಟ್ಟುಕೊಂಡಿದ್ದರಂತೆ. ಅದನ್ನೆಲ್ಲಾ ಬೆಸೆದು ಇದೀಗ 'ಪೆಂಟಗನ್' ಎಂಬ ಚಿತ್ರವನ್ನು ಶುರು ಮಾಡಲಾಗಿದೆ. ಇತ್ತೀಚೆಗಷ್ಟೇ ಯೋಗರಾಜ್ ಭಟ್, 'ಲೂಸಿಯಾ' ಪವನ್, ಶಶಾಂಕ್, ಜಯತೀರ್ಥ ಮತ್ತು ಕೆ.ಎಂ. ಚೈತನ್ಯ ಐವರೂ ಸೇರಿ ಒಂದು ಚಿತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಚಿತ್ರದ ಕೆಲಸಗಳು ಶುರುವಾಗಿದ್ದು, ಸದ್ಯದಲ್ಲೇ ನಿರ್ಮಾಣ ಸಂಸ್ಥೆಯೇ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತದೆ ಎಂದು ಹೇಳಲಾಗಿತ್ತು. ಆದರೀಗ ಗುರು ದೇಶಪಾಂಡೆ ತಮ್ಮ 'ಜಿ ಸಿನಿಮಾಸ್' ಮೂಲಕ ಐವರು ನಿರ್ದೇಶಕರು ಜೊತೆ ಸೇರಿ ಚಿತ್ರವನ್ನು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಎರಡು ಚಿತ್ರಗಳು ಒಂದೇನಾ ಎಂಬ ಪ್ರಶ್ನೆ ಕಾಡುತ್ತಿದೆ.
ಮೂಲಗಳ ಪ್ರಕಾರ ಇವೆರಡೂ ಬೇರೆಬೇರೆ ಚಿತ್ರಗಳಂತೆ. ಗುರು ದೇಶಪಾಂಡೆ ಇಂಥದ್ದೊಂದು ಪ್ರಯೋಗ ಮಾಡುವುದಕ್ಕೆ ಲಾಕ್‍ಡೌನ್ ಸಮಯದಲ್ಲಿ ತಯಾರಿ ನಡೆಸಿದ್ದಾರೆ. ಇದನ್ನು ಅಧಿಕೃತವಾಗಿ ಘೋಷಿಸಬೇಕು ಎನ್ನುವಷ್ಟರಲ್ಲೇ ಯೋಗರಾಜ್ ಭಟ್ ಮುಂತಾದವರು ಸೇರಿಕೊಂಡು ಚಿತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಅದೇ ಕಾರಣಕ್ಕೆ, ಗುರು ದೇಶಪಾಂಡೆ ನಿರ್ದೇಶಕರ ಹೆಸರನ್ನು ಸದ್ಯಕ್ಕೆ ಬಹಿರಂಗಪಡಿಸುತ್ತಿಲ್ಲ. ಈ ಚಿತ್ರವನ್ನು ಬೇರೆ ಐವರೇ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅವರ ಹೆಸರನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದಂತೆ. ಯೋಗರಾಜ್ ಭಟ್ ಮಾಡುತ್ತಿರುವ ಸಿನಿಮಾಗೆ ನಿರ್ಮಾಪಕರು ಯಾರು ಎಂಬುದು ಗೊತ್ತಿಲ್ಲ. ಗುರು ದೇಶಪಾಂಡೆ ಚಿತಕ್ಕೆ ನಿರ್ದೇಶಕರು ಯಾರು ಎಂಬುದರ ಮಾಹಿತಿ ಇಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಎರಡೂ ಚಿತ್ರಗಳ ಪೂರ್ಣ ವಿವರಗಳು ಸಿಗುವ ಸಾಧ್ಯತೆ ಇದೆ.