ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅಭಿನಯದ ಸೂಪರ್ ಹಿಟ್ ಸಿನಿಮಾ 'ಎಂದಿರನ್', ತೆಲುಗು ಹಾಗೂ ಇತರ ಭಾಷೆಗಳಲ್ಲಿ 'ರೋಬೋ' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. 2010 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಇಂದಿಗೂ ಕಾನೂನು ಸಮಸ್ಯೆ ಎದುರಿಸುತ್ತಿದೆ.
ಕೃತಿ ಚೌರ್ಯ ಪ್ರಕರಣಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ನಮ್ಮ ಕಥೆಯನ್ನು ಕದಿಯಲಾಗಿದೆ ಎಂದು ಎಷ್ಟೋ ಮಂದಿ ಕೋರ್ಟ್ ಮೆಟ್ಟಿಲೇರಿದ್ದಾರೆ. 'ಎಂದಿರನ್' ಸಿನಿಮಾಗೆ ಕೂಡಾ ಇದೇ ಸಮಸ್ಯೆ ಕಾಡುತ್ತಿದೆ. ಸೈನ್ಸ್, ಆ್ಯಕ್ಷನ್ ಚಿತ್ರಕ್ಕೆ ಎಸ್.ಶಂಕರ್ ಕಥೆ ಬರೆದು ನಿರ್ದೇಶಿಸಿದ್ದರು. ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ರಾಗ ಸಂಯೋಜಿಸಿದ್ದರು. ಆದರೆ ಈ ಕಥೆಯನ್ನು ನನ್ನ 'ಜುಗಿಬ' ಎಂಬ ಪುಸ್ತಕದಿಂದ ಕದಿಯಲಾಗಿದೆ ಎಂದು ಆರೂರು ತಮಿಳ್ನಾದನ್ ಎಂಬುವವರು 2010 ರಲ್ಲಿ ದೂರು ನೀಡಿದ್ದರು. ನನ್ನ ಕಥೆ ತಮಿಳು ಮ್ಯಾಗಜಿನ್ನಲ್ಲಿ 1996 ಹಾಗೂ 2007 ರಲ್ಲಿ ಪ್ರಕಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕಳೆದ 10 ವರ್ಷಗಳಿಂದ ನಿರ್ದೇಶಕ ಶಂಕರ್ ಈ ಕೇಸ್ ಬಗ್ಗೆ ಹೋರಾಡುತ್ತಿದ್ದಾರೆ. ಕೇಸ್ ವಜಾ ಮಾಡಲು ಮನವಿ ಮಾಡಿದ್ದ ಶಂಕರ್ ಅರ್ಜಿಯನ್ನು ಚೆನ್ನೈ ಹೈಕೋರ್ಟ್ ತಿರಸ್ಕರಿಸಿದೆ. ಈಗ ನಿರ್ದೇಶಕ ಶಂಕರ್ ಪರವಾಗಿ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಸದ್ಯಕ್ಕೆ ಶಂಕರ್ ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ.
'ಎಂದಿರನ್' ಸಿನಿಮಾ ಕನ್ನಡದಲ್ಲಿ 'ಬೊಂಬಾಟ್ ರೋಬೋ' ಹೆಸರಿನಲ್ಲಿ ಡಬ್ ಆಗಿ ಸೆಪ್ಟೆಂಬರ್ 19 ರಂದು ಉದಯ ವಾಹಿನಿಯಲ್ಲಿ ಪ್ರಸಾರವಾಗಿತ್ತು.