ಪ್ರೀತಿ ಪಾತ್ರರು ಹೊರಗೆ ಹೋಗುವಾಗ ಹುಷಾರು ಎಂದು ಹೇಳುವುದು ಸಾಮಾನ್ಯ. ಇದೀಗ ಇದೇ ಹೆಸರಿನಲ್ಲಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. 'ಹುಷಾರ್' ಚಿತ್ರಕ್ಕೆ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ಮುಹೂರ್ತ ನೆರವೇರಿದೆ.
'ಹುಷಾರ್' ಚಿತ್ರಕ್ಕೆ ಹಿರಿಯ ನಿರ್ದೇಶಕ ಭಗವಾನ್ ಮತ್ತು ಎನ್.ಎಂ. ಸುರೇಶ್ ಶುಭ ಕೋರಿದ್ದಾರೆ. ಕಳೆದ ಮೂರು ದಶಕಗಳಿಂದ ಕಿರುತೆರೆ, ಬೆಳ್ಳಿತೆರೆಯ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿರುವ ಸತೀಶ್ ರಾಜ್ ಈ ಚಿತ್ರದ ಮೂಲಕ ಮತ್ತೆ ಆಗಮಿಸುತ್ತಿದ್ದಾರೆ. ಸತೀಶ್ ರಾಜ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಸಾಮಾಜಿಕ ಕಳಕಳಿ ಹೊಂದಿರುವ ಸಿನಿಮಾ. ಸಾಮಾಜಿಕ ಜವಾಬ್ದಾರಿಯುಳ್ಳ ಗ್ರಾಮೀಣ ಪ್ರದೇಶದ ಯುವಕ ಹೇಗೆ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ 'ಹುಷಾರ್' ಚಿತ್ರದ ಕಥೆ ಎಂದು ಸತೀಶ್ ಹೇಳಿದ್ದಾರೆ.
'ಹುಷಾರ್' ಚಿತ್ರದಲ್ಲಿ ವಿಜಯ್ ಮಹೇಶ್ ನಾಯಕನಾಗಿ ಸುಲಕ್ಷಾ ಕೈರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ರಚನಾ ಮಲ್ನಾಡ್, ಲಯ ಕೋಕಿಲ, ಗಣೇಶ್ ರಾವ್, ಪಿ. ಮೂರ್ತಿ, ಸತೀಶ್ ರಾಜ್, ರತ್ನಮಾಲ, ಮೂಗು ಸುರೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ. ನವೆಂಬರ್ ಎರಡನೇ ವಾರದಿಂದ ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿ ಇತರೆಡೆ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಪೂರ್ಣಚಂದ್ರ ಛಾಯಾಗ್ರಹಣ, ಎಸ್. ನಾಗು ಸಂಗೀತ, ಜೆ.ಜೆ. ಶರ್ಮಾ ಸಂಕಲನ, ಅಕುಲ್. ಎಸ್ ನೃತ್ಯ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಇರಲಿದೆ.