ಎಸ್.ನಾರಾಯಣ್ ನಿರ್ದೇಶನದ 'ಚಂದ್ರ ಚಕೋರಿ' ಚಿತ್ರ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ಈ ಚಿತ್ರವು ಶ್ರೀಮುರಳಿಗೆ ದೊಡ್ಡ ಬ್ರೇಕ್ ನೀಡಿತ್ತು. ಆದರೆ, ಶ್ರೀಮುರಳಿಗೂ ಮುನ್ನ ಈ ಚಿತ್ರದಲ್ಲಿ ಆದಿತ್ಯ ನಟಿಸಬೇಕಿತ್ತಂತೆ. ಹಾಗಂತ ಸ್ವತಃ ನಿರ್ದೇಶಕ ಎಸ್.ನಾರಾಯಣ್ ಹೇಳಿಕೊಂಡಿದ್ದಾರೆ.
ಶುಕ್ರವಾರ ಸಂಜೆ '5ಡಿ' ಚಿತ್ರದ ಟೈಟಲ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು 'ಕುರಿಗಳು ಸಾರ್ ಕುರಿಗಳು' ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಜೊತೆ ಜೊತೆಗೆ 'ಚಂದ್ರ ಚಕೋರಿ' ಕೆಲಸವನ್ನೂ ಮಾಡುತ್ತಿದ್ದೆ. 'ಕುರಿಗಳು' ಸೆಟ್ಗೆ ಸಹಾಯಕ ನಿರ್ದೇಶಕರನ್ನು ಕರೆಸಿಕೊಂಡು, ಬಿಡುವಿದ್ದಾಗಲೆಲ್ಲ 'ಚಂದ್ರ ಚಕೋರಿ'ಯ ಚರ್ಚೆ ಮಾಡುತ್ತಿದ್ದೆ.
ಆ ಚಿತ್ರಕ್ಕೆ ಒಬ್ಬ ಹೊಸ ಹುಡುಗ ಇದ್ದರೆ ಚೆನ್ನ ಅಂತಾ ಎನಿಸುತ್ತಿತ್ತು. ಆ ಸಂದರ್ಭದಲ್ಲಿ ಆದಿತ್ಯ ಸೆಟ್ಗೆ ಬರುತ್ತಿದ್ದರು. ಅವರು 'ಕುರಿಗಳು' ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು. ಪ್ರತಿದಿನ ಸೆಟ್ಗೆ ಬರುತ್ತಿದ್ದ ಅವರನ್ನು ನೋಡಿ, 'ಚಂದ್ರ ಚಕೋರಿ'ಗೆ ಅವರೇ ಸೂಕ್ತ ಎಂದೆನಿಸಿತ್ತು.
ಈ ವಿಷವಾಗಿ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಕೇಳಿದ್ದೆ. ಅವರು ತಾವೇ 'ಲವ್' ಎನ್ನುವ ಚಿತ್ರ ಮಾಡುತ್ತಿರುವುದಾಗಿ ಹೇಳಿದರು. ಹಾಗಾಗಿ ಬೇರೆ ಹೀರೋನನ್ನು ಹುಡುಕಬೇಕಾಯಿತು' ಎಂದು ನಾರಾಯಣ್ ಹೇಳಿಕೊಂಡಿದ್ದಾರೆ.
ಓದಿ: ಬಹಳ ದಿನಗಳ ನಂತರ ಹೊಸ ಸಿನಿಮಾವೊಂದನ್ನು ಘೋಷಿಸಿದ ನಿರ್ದೇಶಕ ಎಸ್. ನಾರಾಯಣ್
ಹೀಗೆ 18 ವರ್ಷಗಳ ಹಿಂದೆಯೇ ಜೊತೆಯಾಗಿ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದರು ಆದಿತ್ಯ ಮತ್ತು ಎಸ್ ನಾರಾಯಣ್. ಈಗ '5ಡಿ' ಚಿತ್ರದ ಮೂಲಕ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಈ ಚಿತ್ರಕ್ಕೆ ಆದಿತ್ಯ ನಾಯಕನಾದ್ರೆ ಸೂಕ್ತ ಎಂದು ಕಥೆಗಾರರು ಹೇಳಿದ್ದರಂತೆ. ಆದಿತ್ಯ ಅವರನ್ನು ಕೇಳಿದಾಗ, ಕಥೆ ಕೇಳದೆಯೇ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ '5 ಡಿ' ಚಿತ್ರದ ಚಿತ್ರೀಕರಣ ಶುಕ್ರವಾರದಿಂದ ಪ್ರಾರಂಭವಾಗಿದೆ.