'ಏಕ್ ಲವ್ ಯಾ' ಟೀಸರ್ ಹಾಗೂ ಹಾಡುಗಳಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಚಿತ್ರ. 'ಜೋಗಿ' ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ಸಹೋದರ ರಾಣ ಅಭಿನಯಿಸುತ್ತಿರುವ ಈ ಸಿನಿಮಾ ಇದೇ ತಿಂಗಳ 24ಕ್ಕೆ ಪ್ರೇಕ್ಷಕರ ಮುಂದೆ ಬರ್ತಾ ಇದೆ. ಈ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ನಟ ಪ್ರೇಮ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್ ಸಮ್ಮುಖದಲ್ಲಿ ಫಿಲ್ಮ್ ಚೇಂಬರ್ನಲ್ಲಿ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡ ಸಿನಿಮಾಗಳಿಗೆ ಸೌಂಡಿಂಗ್ ಕಡಿಮೆ ಮಾಡಲಾಗುತ್ತಿದೆ ಅಂತಾ ಪ್ರೇಮ್ ಆರೋಪಿಸಿದರು. ಸದ್ಯ ಎಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿ 7.0 ಸೌಂಡಿಂಗ್ ಸಿಸ್ಟಂ ಅನ್ನ ಅಳವಡಿಸಲಾಗಿರುತ್ತೆ. ಆದರೆ, ಕನ್ನಡ ಸಿನಿಮಾಗಳಿಗೆ 4.0 ಮಾತ್ರ ಸೌಂಡಿಂಗ್ ನೀಡುತ್ತಿದ್ದು, ಸಿನಿಮಾ ನೋಡುವ ಪ್ರೇಕ್ಷಕರಿಗೆ ಅಷ್ಟೊಂದು ಫೀಲ್ ಆಗೋದಿಲ್ಲ. ಇದೇ ಮಲ್ಟಿಪ್ಲೆಕ್ಸ್ನಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ 7.0 ಸೌಂಡಿಂಗ್ ಕೊಡಲಾಗುತ್ತಿದೆ.
ನಾವು ನಮ್ಮ ಸಿನಿಮಾಗಳಿಗೆ 7.0 ಸೌಂಡಿಂಗ್ ತಂತ್ರಜ್ಞಾನವನ್ನ ಬಳಸುತ್ತಿದ್ದು, ಆದರೂ ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಸಿನಿಮಾಗಳಿಗೆ 4.0 ಮಟ್ಟದಲ್ಲಿ ಸೌಂಡ್ ಕೊಡಲಾಗುತ್ತದೆ ಅಂತಾ ಪ್ರೇಮ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಯುಎಫ್ಒ ಹಾಗೂ ಕ್ಯೂಬ್ ವಿರುದ್ಧ ಪ್ರೇಮ್ ಅಸಮಾಧಾನ : ಇದೇ ವೇಳೆ, ಯುಎಫ್ಒ ಹಾಗೂ ಕ್ಯೂಬ್ ವಿರುದ್ಧ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ರಾಜ್ಯಗಳಲ್ಲಿ ಯುಎಫ್ಒ ಹಾಗೂ ಕ್ಯೂಬ್ ಸಂಸ್ಥೆಗಳು ಇಲ್ಲ. ನಾವು ನಮ್ಮ ಸಿನಿಮಾವನ್ನ ಆಪ್ಲೋಡ್ ಮಾಡಲು ಪ್ರತಿ ಬಾರಿ ಚೆನ್ನೈಗೆ ಹೋಗಬೇಕು. ಅಲ್ಲಿ ನಮಗೆ ದಿನಗಟ್ಟಲೇ ಕಾಯಿಸಿ, ಬಳಿಕ ನಮ್ಮ ಸಿನಿಮಾಗಳನ್ನ ಆಪ್ಲೋಡ್ ಮಾಡಲಾಗುತ್ತೆ. ಹೀಗಾಗಿ, ಯುಎಫ್ಒ ಹಾಗೂ ಕ್ಯೂಬ್ ಸಂಸ್ಥೆಗೆ ಸಂಬಂಧ ಪಟ್ಟವರನ್ನ ಕರೆಯಿಸಿ ಸಮಸ್ಯೆಯನ್ನ ಬಗೆಹರಿಸಿ ಅಂತಾ ಪ್ರೇಮ್ ಫಿಲ್ಮ್ ಚೇಂಬರ್ಗೆ ಮನವಿ ಮಾಡಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ಮನವಿ ಸ್ವೀಕರಿಸಿರುವ ಫಿಲ್ಮ್ ಚೇಂಬರ್, ಮುಂದಿನ ಎರಡು ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತದೆ ಅಂತಾ ತಿಳಿಸಿದೆ.