ಸೋಲಿಲ್ಲದ ಸರದಾರ, ರೌಡಿ ಎಂಎಲ್ಎ, ತವರಿಗೆ ಬಾ ತಂಗಿ ಹಾಗೂ ಅಣ್ಣ-ತಂಗಿಯಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಓಂಸಾಯಿ ಪ್ರಕಾಶ್ ತಮ್ಮ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಓಂಸಾಯಿ ಪ್ರಕಾಶ್ ಅಭಿಮಾನಿಗಳು ರಕ್ತದಾನ ಶಿಬಿರ ಹಾಗೂ ನೂರಾರು ರೋಗಿಗಳಿಗೆ ಅನ್ನದಾನ ಏರ್ಪಡಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ತಮ್ಮ 66ನೇ ವರ್ಷದ ಹುಟ್ಟುಹಬ್ಬವನ್ನು ಕ್ಯಾನ್ಸರ್ ರೋಗಿಗಳ ಜೊತೆ ಆಚರಿಸಿಕೊಂಡ ಸಾಯಿ ಪ್ರಕಾಶ್ ಈವರೆಗೂ ಸುಮಾರು 115ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರಂತೆ. ಡಾ. ರಾಜ್ಕುಮಾರ್ ಅವರ ಪಕ್ಕಾ ಅಭಿಮಾನಿಯಾಗಿರುವ ಸಾಯಿ ಪ್ರಕಾಶ್, ಅಣ್ಣಾವ್ರ ಹುಟ್ಟುಹಬ್ಬ, ಸಾಯಿಬಾಬಾ ದಿನಾಚರಣೆಯಂದು ಪ್ರತಿವರ್ಷ ರಕ್ತದಾನ ಮಾಡ್ತಾರಂತೆ. ಇನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳು ಹೆಚ್ಚಾಗಿರುವ ಕಾರಣ ಅವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಹಾಗಾಗಿ ಕಿದ್ವಾಯಿಯಲ್ಲಿ ಈ ಬಾರಿ ರಕ್ತದಾನ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದಾಗಿ ತಿಳಿಸಿದರು.
ಕನ್ನಡದಲ್ಲಿ ಸುಮಾರು 104 ಚಿತ್ರಗಳನ್ನು ನಿರ್ದೇಶನ ಮಾಡಿರುವ ಓಂಸಾಯಿ ಪ್ರಕಾಶ್ ಅವರು ಇತ್ತೀಚಿನ ದಿನಗಳಲ್ಲಿ ನಿರ್ದೇಶನದಿಂದ ದೂರವೇ ಉಳಿದಿದ್ದರು. 'ಈಗ ಎಲ್ಲವೂ ಬದಲಾಗಿದೆ. ನಮ್ಮನ್ನು ನಂಬಿಕೊಂಡು ಬರುವಂತಹ ನಿರ್ಮಾಪಕರಿಗೂ ನಷ್ಟವಾಗಬಾರದು ಸಿನಿಮಾ ಮಾಡಿದರೆ ನಿರ್ಮಾಪಕರ ಹಣ ವಾಪಸ್ ಬರುವಂತಹ ಸಿನಿಮಾ ಮಾಡಬೇಕು. ಅಲ್ಲದೆ ನಾನು ಸಾಯಿಬಾಬಾ ಅವರ ಜೀವನ ಚರಿತ್ರೆಯ ಸಿನಿಮಾ ಮಾಡುವುದಕ್ಕೆ ಕಳೆದ ಎರಡು ವರ್ಷಗಳಿಂದ ಸ್ಕ್ರಿಪ್ಟ್ ವರ್ಕ್ನಲ್ಲಿ ಬ್ಯುಸಿಯಾಗಿದ್ದೇನೆ. ಈಗ ಆ ಕೆಲಸ ಮುಗಿದಿದ್ದು, ಶೀಘ್ರದಲ್ಲಿ ಸಾಯಿಬಾಬಾ ಅವರ ಜೀವನ ಚರಿತ್ರೆಯ ಸಿನಿಮಾ ನಿರ್ದೇಶಿಸುತ್ತೇನೆ' ಎಂದು ಸಾಯಿ ಪ್ರಕಾಶ್ ತಿಳಿಸಿದ್ದಾರೆ.