ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಬಂಧಿತರಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿದಂತೆ ಇನ್ನಿತರ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ.
ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆರೋಪಿಗಳ ಕೂದಲು ಸ್ಯಾಂಪಲ್ ಸಂಗ್ರಹಿಸಿ, ಕಳೆದ ವರ್ಷ ಡಿಸೆಂಬರ್ನಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದು ಸಿಸಿಬಿ ಪೊಲೀಸರು ಕಳುಹಿಸಿದ್ದರು. ಸ್ಯಾಂಪಲ್ ಕಳುಹಿಸಿ 9 ತಿಂಗಳ ಬಳಿಕ ವರದಿಯು ಅಧಿಕಾರಿಗಳ ಕೈ ಸೇರಿದ್ದು, ಸ್ಯಾಂಪಲ್ ತೆಗೆದುಕೊಂಡಿದ್ದ ಎಲ್ಲ ಆರೋಪಿಗಳು ಡ್ರಗ್ಸ್ ತೆಗೆದುಕೊಂಡಿರುವುದು ಖಚಿತವಾಗಿದೆ.
'ಇವು ಸಣ್ಣ ಮೀನುಗಳು..ದೊಡ್ಡ ದೊಡ್ಡ ತಿಮಿಂಗಿಲಗಳು ಇವೆ'
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಸಿಬಿ ಅಧಿಕಾರಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆದು, ಸತ್ಯ ಹೊರಗಡೆ ಬಂದಿದೆ. ನಾನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದಾಗ ಸುಮಾರು ಜನ ಬೆನ್ನು ತಟ್ಟಿದರು. ಕೆಲವರು ಗಾಳಿಯಲ್ಲಿ ಗುಂಡು ಹೊಡಿತಿದ್ದಾರೆ. ಸುಖಾಸುಮ್ಮನೆ ಊಹಾಪೋಹಗಳನ್ನ ಸೃಷ್ಟಿಸಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಸಮಾಜದ ಹಿತ ದೃಷ್ಟಿಯಿಂದ ಸಮಾಧಾನ ತಂದಿದೆ. ಈ ಮಾಫಿಯಾದಲ್ಲಿ ಸಣ್ಣ ಮೀನುಗಳು ಇವು ಅಂತ ಮೊದಲೇ ಹೇಳಿದ್ದೆ, ಈಗ ಡ್ರಗ್ಸ್ ಪ್ರಕರಣದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳು ಇವೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಈ ಹೋರಾಟಕ್ಕೆ ಎಲ್ಲರೂ ಸಹಕರಿಸಿ
ಇವತ್ತು ಕೋಟ್ಯಂತರ ರೂಪಾಯಿ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ ಆಗ್ತಿದೆ. ಇದರಲ್ಲಿ ದೊಡ್ಡ ತಿಮಿಂಗಿಲಗಳನ್ನ ಹಿಡಿಯಬೇಕಿದೆ. ಕೋರ್ಟ್ನಲ್ಲಿ ಈ ಕೇಸ್ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಅದನ್ನು ಬಹಿರಂಗ ಮಾಡುವ ಹಾಗಿಲ್ಲ. ಸಿಸಿಬಿಗೆ ನಾನು ಎಲ್ಲ ರೀತಿಯಲ್ಲಿಯೂ ಸಹಕರಿಸಿರುವೆ. ಇದು ಒನ್ ಡೇ ಮ್ಯಾಚ್ ಅಲ್ಲ. ನಿರಂತರ ತನಿಖೆ ನಡೆಯುತ್ತಿರುತ್ತದೆ ಎಂದರು.
ವೈಯಕ್ತಿಕ ಹೋರಾಟ ಮಾಡಬಾರದು. ಸಮಾಜದ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು. ಸಿಸಿಬಿ ಮತ್ತೆ ಕರೆದಾಗ ಸಹಕರಿಸಲು ರೆಡಿ ಇರುವ ₹12 ಕೋಟಿಯಷ್ಟು ಡ್ರಗ್ಸ್ ಅನ್ನು ಹೊಟ್ಟೆಯಲ್ಲಿ ಇಟ್ಕೊಂಡು ಸಪ್ಲೈ ಮಾಡ್ತಿದ್ದಾರೆ. ಇದರಿಂದ ಯುವಕರು, ವಿದ್ಯಾರ್ಥಿಗಳು ಹಾಳಾಗ್ತಿದ್ದಾರೆ ಎಂದು ಆರೋಪಿಸಿದರು.
ಓದಿ: ‘I Love Taliban’.. ಉಗ್ರರ ಪರ ಎಫ್ಬಿ ಪೋಸ್ಟ್, ಬಾಗಲಕೋಟೆಯಲ್ಲಿ ಆರೋಪಿ ಅರೆಸ್ಟ್