ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ದೊರೆತಿದ್ದು, ದಯಾಳ್ ಸಂತೋಷ ವ್ಯಕ್ತಪಡಿಸಿದ್ದಾರೆ. ನನ್ನ ಚಿತ್ರಕ್ಕೆ ಖಂಡಿತ ಯು ಅಥವಾ ಯು/ಎ ಸರ್ಟಿಫಿಕೇಟ್ ಸಿಗಲಿದೆ ಎಂದು ಮೊನ್ನೆಯಷ್ಟೇ ದಯಾಳ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.
ಚಿತ್ರದ ಯಾವುದೇ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡದೆ, ಯಾವುದೇ ಡೈಲಾಗ್ಗಳನ್ನು ಮ್ಯೂಟ್ ಮಾಡದೆ ಸೆನ್ಸಾರ್ ಮಂಡಳಿ ಅರ್ಹತಾ ಪತ್ರ ನೀಡಿದೆ. ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ನಾನು ಸಿನಿಮಾ ಮಾಡಲು ಸ್ಫೂರ್ತಿ ಎಂದು ದಯಾಳ್ ಹೇಳಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಹೆಣ್ಣನ್ನು ಸಮಾಜ ಹೇಗೆ ನೋಡುತ್ತದೆ. ಆಕೆ ಎಲ್ಲವನ್ನು ಎದುರಿಸಿ ಹೇಗೆ ಬದುಕುತ್ತಾಳೆ ಎಂಬುದು ಚಿತ್ರದ ಕಥಾವಸ್ತು. ಈ ಚಿತ್ರಕ್ಕೆ 'ರಂಗನಾಯಕಿ' ಎಂದು ಹೆಸರಿಡಲಾಗಿದ್ದರೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ದಯಾಳ್ ಪದ್ಮನಾಭನ್.
ಚಿತ್ರದಲ್ಲಿ ಅತ್ಯಾಚಾರ ಸಂತ್ರಸ್ತೆಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇವರೊಂದಿಗೆ ತ್ರಿವಿಕ್ರಮ್, ಎಂ.ಜಿ. ಶ್ರೀನಿವಾಸ್, ಲಾಸ್ಯ ನಾಗರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ. ಎಸ್.ವಿ. ನಾರಾಯಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಣಿಕಾಂತ್ ಖದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.